ಹೆರಿಗೆ ಬಳಿಕ ಬಾಣಂತಿ ಸಾ*: ವೈದ್ಯರ ನಿರ್ಲಕ್ಷ್ಯ ಆರೋಪ

ಹೆರಿಗೆ ಬಳಿಕ ಬಾಣಂತಿ ಸಾ*: ವೈದ್ಯರ ನಿರ್ಲಕ್ಷ್ಯ ಆರೋಪ

ಹೆಣ್ಣು ಮಗುವಿಗೆ ಜನ್ಮ ನೀಡಿ ಕಣ್ಮುಚ್ಚಿದ ತಾಯಿ.

ಚಿತ್ರದುರ್ಗ: ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಹಿಳೆಯೋರ್ವರು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಹೆರಿಗೆ ವೇಳೆ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷದಿಂದಾಗಿಯೇ  ಸಾವಾಗಿರೋದಾಗಿ ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಶಿಲ್ಪಾ(28) ಮೃತ ದುರ್ದೈವಿಯಾಗಿದ್ದು, ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುಗೆ ದಾಖಲಿಸುವುದಾಗಿ ಹೇಳಿ ಶಿಲ್ಪಾರ ಮೃತದೇಹವನ್ನು ಶವಾಗಾರಕ್ಕೆ ಶಿಫ್ಟ್​​ ಮಾಡಲಾಗಿದೆ. ಮಗುವಿನ ಆರೋಗ್ಯದ ಮಾಹಿತಿ ಕೂಡ ತಮಗೆ ನೀಡಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಚಳ್ಳಕೆರೆ ತಾಲೂಕಿನ ಪರಶುರಾಂಪುರದ ಶಿಲ್ಪಾರನ್ನು ನಿನ್ನೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ತಡರಾತ್ರಿ ಹೆಣ್ಣು ಮಗುವಿಗೆ ಅವರು ಜನ್ಮ ನೀಡಿದ್ದರು. ಹೆರಿಗೆ ಬಳಿಕ ವೈದ್ಯರು ನಿರ್ಲಕ್ಷ ತೋರಿದ ಪರಿಣಾಮ ಶಿಲ್ಪಾಳ ಸಾವು ಸಂಭವಿಸಿದೆ. ಏಕಾಏಕಿ ಐಸಿಯುಗೆ ಶಿಫ್ಟ್ ಮಾಡಬೇಕೆಂದು ಹೇಳಿ ನೇರವಾಗಿ ಶವಾಗಾರಕ್ಕೆ ಶಿಫ್ಟ್ ಮಾಡಿದ್ದಾರೆ ಎಂಬುದು ಮೃತಳ ತಾಯಿ ದುರ್ಗಮ್ಮ ಅವರ ಆರೋಪ. ಇನ್ನು ವಿಷಯ ತಿಳಿಯುತ್ತಿದ್ದಂತೆ ಮೃತರ ಸಂಬಂಧಿಕರು ಆಸ್ಪತ್ರೆ ಬಳಿ ಜಮಾಯಿಸಿದ್ದು, ಜಿಲ್ಲಾಸ್ಪತ್ರೆಯ ಮುಖ್ಯಸ್ಥರಾದ ಡಾ.ರವೀಂದ್ರ ಸೇರಿ ಸಿಬ್ಬಂದಿಯನ್ನು ತರಾಟೆಗೆ ಪಡೆದಿದ್ದಾರೆ. ತಪ್ಪಿತಸ್ಥ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ದಲಿತಪರ ಸಂಘಟನೆಗಳ ಮುಖಂಡರು ಮೃತಳ ಸಂಬಂಧಿಕರಿಗೆ ಸಾಥ್ ನೀಡಿದ್ದಾರೆ.

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಮುಖ್ಯಸ್ಥ ಡಾ.ರವೀಂದ್ರ, ಶಿಲ್ಪಾ ಅವರನ್ನು ತಡವಾಗಿ ಹೆರಿಗೆಗೆ ಕರೆತಂದಿದ್ದಾರೆ. . ಹೀಗಿದ್ದರೂ ವೈದ್ಯರ ವಿರುದ್ಧ ಶಿಲ್ಪಾ ಸಂಬಂಧಿಕರ ಆರೋಪ ಹಿನ್ನೆಲೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕೋಟೆನಾಡು ಚಿತ್ರದುರ್ಗದ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಒಂದಲ್ಲ ಒಂದು ದೂರು ಕೇಳಿ ಬರುತ್ತಲೇ ಇರುವ ನಡುವೆಯೇ ನಡೆದ ಬಾಣಂತಿಯ ಸಾವು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯ ವ್ಯವಸ್ಥೆ ಸುಧಾರಿಸಿ ಜನರ ಪ್ರಾಣ ರಕ್ಷಣೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *