ಬೆಂಗಳೂರು: ತಮ್ಮ ವಿರುದ್ಧ ರಾಜ್ಯಪಾಲರು ತನಿಖೆಗೆ ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೈಕೋರ್ಟ್‌ನಲ್ಲಿ ಇನ್ನೆರಡು ದಿನಗಳ ಕಾಲ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ರಾಜ್ಯಪಾಲರ ಆದೇಶ ವಜಾಗೊಳಿಸಬೇಕು ಎಂದು ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೋಮವಾರ ಸೆಪ್ಟೆಂಬರ್ 2ಕ್ಕೆ ಹೈಕೋರ್ಟ್ ಮುಂದೂಡಿದೆ.
ಸೋಮವಾರ ಮಧ್ಯಾಹ್ನ 2:30ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಲಾಗಿದೆ. ಆ ಮೂಲಕ ಹಿಂದಿನ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮುಂದುವರಿಸಿದೆ.
ದೂರುದಾರ ಟಿ.ಜೆ.ಅಬ್ರಹಾಂ ಪರ ಹಿರಿಯ ವಕೀಲ ರಂಗನಾಥ್ ರೆಡ್ಡಿ ವಾದ ಮುಗಿಸುತ್ತಿದ್ದಂತೆ ಮತ್ತಷ್ಟು ವಕೀಲರಿಂದ ವಾದ ಮಂಡನೆಗೆ ಮನವಿ ಮಾಡಲಾಯಿತು. ಇದಕ್ಕೆ ಇಡೀ ದಿನ ವಾದ ಮಂಡನೆಗೆ ಅವಕಾಶ ಕೊಟ್ಟಿದ್ದೀನಿ ಎಂದು ಗರಂ ಆದರು
ಈ ವೇಳೆ ಮಧ್ಯಪ್ರವೇಶಿಸಿದ ಅಬ್ರಹಾಂ ಪರ ವಕೀಲರಾದ ರಂಗನಾಥ್ ರೆಡ್ಡಿ, ರಾಜ್ಯಪಾಲರ ಮುಂದೆ ಯಾವುದೇ ಜನಪ್ರತಿನಿಧಿಗಳ ಪ್ರಾಸಿಕ್ಯೂಷನ್ ಅನುಮತಿ ಬಾಕಿ ಇಲ್ಲ ಎಂದು ಹೇಳಿದರು. ಅದಕ್ಕೆ ನಿಮಗೆ ಹೇಗೆ ಗೊತ್ತಾಯ್ತು? ಅಂತ ಜಡ್ಜ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ರಂಗನಾಥ್ ರೆಡ್ಡಿ ಅವರು ಆರ್‌ಟಿಐ ಮೂಲಕ ಮಾಹಿತಿ ಪಡೆದುಕೊಳ್ಳಲಾಗಿದೆ. ಎಲ್ಲಾ ಅರ್ಜಿಗಳನ್ನ ವಿಲೇವಾರಿ ಮಾಡಲಾಗಿದೆ. ರಾಜ್ಯಪಾಲರ ಮುಂದೆ ಸದ್ಯ ಯಾವುದೇ ಪ್ರಾಸಿಕ್ಯೂಷನ್ ಮನವಿ ಅರ್ಜಿ ಬಾಕಿ ಇಲ್ಲ ಎಂದು ವಾದ ಮಂಡಿಸಿದರು
ಈ ವೇಳೆ ಎ.ಜಿ ಶಶಿಕಿರಣ್ ಶೆಟ್ಟಿ ಅವರಿಂದ ವಾದಕ್ಕೆ ಮನವಿ ಮಾಡಲಾಯಿತು. ಇದಕ್ಕೆ ಜಡ್ಜ್ ದಿನ ಬೇಕಿದ್ರೆ 3:30ಕ್ಕೆ ವಿಚಾರಣೆಗೆ ತೆಗೆದುಕೊಳ್ತೀನಿ, ಅದಕ್ಕೂ ಮೊದಲು ಸಾಧ್ಯವಿಲ್ಲ ಎಂದರು. ಈ ವೇಳೆ ಪ್ರತಿವಾದಿಗಳ ವಾದಕ್ಕೆ ಉತ್ತರ ಕೊಡಲು ಸಿಎಂ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಸಮಯಾವಕಾಶ ನೀಡುವಂತೆ ಕೋರಿದರು. ನಂತರ ಕೋರ್ಟ್, ಸೋಮವಾರಕ್ಕೆ (ಸೆ.2) ವಿಚಾರಣೆ ಮುಂದೂಡಿತು.