ಪ್ರೀತಿ ಹೆಸರಲ್ಲಿ ಪ್ಲ್ಯಾನ್ ಮಾಡಿದ ಹ*! ಅ*ಚಾರ ಉದ್ದೇಶದಿಂದ ಬಾಲಕಿಯನ್ನು ಕರೆದೊಯ್ಯುತ್ತಿದ್ದ ವೇಳೆ ದುರಂತ.

ಪ್ರೀತಿ ಹೆಸರಲ್ಲಿ ಪ್ಲ್ಯಾನ್ ಮಾಡಿದ ಹ*! ಅ*ಚಾರ ಉದ್ದೇಶದಿಂದ ಬಾಲಕಿಯನ್ನು ಕರೆದೊಯ್ಯುತ್ತಿದ್ದ ವೇಳೆ ದುರಂತ.

ಬೆಂಗಳೂರು: ಅತ್ಯಾಚಾರ ಎಸಗುವ ಉದ್ದೇಶದಿಂದ ಅಪ್ರಾಪ್ತೆಯನ್ನು ಬಲವಂತವಾಗಿ ಕರೆದೊಯ್ಯುವ ವೇಳೆ ಡಿವೈಡರ್​ಗೆ ಬೈಕ್​ ಡಿಕ್ಕಿಯಾಗಿ  ಬಾಲಕಿ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಪಟ್ಟಣ ಬಳಿ ನಡೆದಿದೆ. ಪ್ರೀತಿ ಹೆಸರಿನಲ್ಲಿ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಬಾಲಕಿ ಹಿಂದೆ ಬಿದ್ದಿದ್ದ ಅಜಯ್​ ಎಂಬಾತ ತನ್ನ ಸಹಚರರ ಜೊತೆಗೂಡಿ ಬಾಲಕಿಯನ್ನ ಲೈಂಗಿಕವಾಗಿ ಬಳಸಿಕೊಳ್ಳಲು ಕರೆದೊಯ್ಯುತ್ತಿದ್ದ ಎನ್ನಲಾಗಿದೆ.

ಆರೋಪಿಗಳು ಒಟ್ಟು 2 ಬೈಕ್​ನಲ್ಲಿ ತೆರಳಿದ್ದು, ಆ ಪೈಕಿ ಒಂದು ಬೈಕ್​ನಲ್ಲಿ ಅಜಯ್​, ಬಾಲಕಿ ಮತ್ತು ಇನ್ನೊಬ್ಬ ಇದ್ದ ಎನ್ನಲಾಗಿದೆ. ಹೊಸಕೋಟೆ ಮಾರ್ಗವಾಗಿ ಬಾಲಕಿಯನ್ನು ಕರೆದೊಯ್ಯುತ್ತಿದ್ದ ವೇಳೆ ಅಪಘಾತ ನಡೆದಿದ್ದು, ಈ ವೇಳೆ ಬಾಲಕಿ ಸಾವನ್ನಪ್ಪಿದ್ದಾಳೆ. ಬೈಕ್​ನಲ್ಲಿದ್ದ ಉಳಿದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಕ್ಟೋಬರ್​​ 24ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಶಾಲೆಗೆ ಹೋದ ಬಾಲಕಿ ಮನೆಗೆ ವಾಪಾಸ್ ಬಾರದೆ ಇದ್ದಾಗ ಪೋಷಕರು ಕಂಗಾಲಾಗಿದ್ದು, ಈ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಿಸಿದ್ದರು. ಅದೇ ದಿನ ಸಂಜೆ ಹೊಸಕೋಟೆ ಪೊಲೀಸರಿಂದ ಬಾಲಕಿ ಪೋಷಕರಿಗೆ ಕರೆ ಬಂದಿದ್ದು, ನಿಮ್ಮ ಮಗಳು ಅಪಘಾತದಲ್ಲಿ ಮೃತಪಟ್ಟಿದ್ದಾಳೆಂದು ಮಾಹಿತಿ ನೀಡಿದ್ದರು.

ಬಲವಂತವಾಗಿ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನ ಆರೋಪ ಹಿನ್ನಲೆ ಅಜಯ್ ಅಲಿಯಾಸ್ ಮನೋಜ್, ಇರ್ಫಾನ್, ಮುಬಾರಕ್ ಸೇರಿ ಓರ್ವ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಅಪಹರಣ ಹಾಗೂ ಪೋಕ್ಸೋ ಪ್ರಕರಣದಡಿ ಆರೋಪಿಗಳನ್ನ ಅರೆಸ್ಟ್​ ಮಾಡಲಾಗಿದ್ದು, ಬಂಧಿತರನ್ನ ಜೈಲಿಗೆ ಅಟ್ಟಲಾಗಿದೆ. ಬದುಕಿ ಬಾಳಬೇಕಿದ್ದ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *