ಯುಎಸ್‌ಎ): ನಾನು ಇನ್ನು ಸ್ವಲ್ಪ ದಿನಗಳ ಕಾಲ ಆಡುತ್ತೇನೆ. ನಾನು ಆಡುವುದನ್ನು ನೀವು ನಿಮ್ಮ ಕಣ್ಣಾರೆ ನೋಡುತ್ತೀರಿ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಅಮೆರಿಕದಲ್ಲಿ ತಮ್ಮ ಕ್ರಿಕೆಟ್ ಅಕಾಡೆಮಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಗೆ ನಿವೃತ್ತಿ ಘೋಷಣೆ ಮಾಡುವುದಿಲ್ಲ ಎಂಬ ಸುಳಿವನ್ನು ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಡಿಯೋ ಮತ್ತು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಜಾಗ ಪಡೆದಿವೆ. ವೆಸ್ಟ್ ಇಂಡೀಸ್ ಸರಣಿ ಮುಗಿಸಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಮುಂಬರುವ ಏಷ್ಯಾಕಪ್, ಏಕದಿನ ವಿಶ್ವಕಪ್ ಸಲುವಾಗಿ ವಿಶ್ರಾಂತಿಯಲ್ಲಿದ್ದಾರೆ. ವಿಂಡೀಸ್ ಪ್ರವಾಸ ಮುಗಿಸಿದ ಬೆನ್ನಲ್ಲೇ ಅಮೆರಿಕಕ್ಕೆ ತೆರಳಿದ್ದು, ಅಲ್ಲಿ ತಮ್ಮ ಕ್ರಿಕೆಟ್ ಅಕಾಡೆಮಿ ಉದ್ಘಾಟಿಸಿ ಈ ಹೇಳಿಕೆ ನೀಡಿದ್ದಾರೆ.
ನೂತನ ಕ್ರಿಕೆಟ್ ಅಕಾಡೆಮಿಗೆ ‘ಕಿಂಗ್ಡಮ್’ ಎಂದು ಹೆಸರು ಇಡುವ ಮೂಲಕ ಸಾವಿರಾರು ಯುವಕರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಭಾರತದಲ್ಲಿ ಕೂಡ ಈ ಹೆಸರಲ್ಲಿ ಈಗಾಗಲೇ ಅಕಾಡೆಮಿ ಇದೆ. ಇದೀಗ ಇದರ ಬ್ರಾಂಚ್ ಅನ್ನು ಅಮೆರಿಕದಲ್ಲೂ ಆರಂಭಿಸಿದ್ದಾರೆ. ಭಾನುವಾರ ಇದರ ಉದ್ಘಾಟನೆಯಾಗಿದ್ದು, ಕಾರ್ಯಕ್ರಮದಲ್ಲಿ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಭಾಗಿಯಾಗಿದ್ದರು.
ಇತ್ತೀಚೆಗಷ್ಟೇ ಮುಕ್ತಾಯವಾದ ಟಿ20 ವಿಶ್ವಕಪ್ ಟೂರ್ನಿ ಬಳಿಕ ಅಂತಾರಾಷ್ಟ್ರೀಯ ಟಿ20 ವೃತ್ತಿ ಜೀವನಕ್ಕೆ ರೋಹಿತ್ ವಿದಾಯ ಹೇಳಿದರು. ರೋಹಿತ್ ಜೊತೆಗೆ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಕೂಡ ಅಂತಾರಾಷ್ಟ್ರೀಯ ಟಿ20 ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದರು. ವಿಶ್ವಕಪ್ ಗೆದ್ದಿದ್ದನ್ನು ಕಂಡು ಕ್ರಿಕೆಟ್ ಅಭಿಮಾನಿಗಳು ಎಷ್ಟು ಖುಷಿಪಟ್ಟಿದ್ದರೋ, ಇವರ ನಿವೃತ್ತಿ ಘೋಷಣೆ ಕೂಡ ಅಷ್ಟೇ ಬೇಸರ ತರಿಸಿತು.
37ನೇ ವರ್ಷಕ್ಕೆ ಕಾಲಿಟ್ಟಿರುವ ರೋಹಿತ್ ಶರ್ಮಾ, ಸದ್ಯದಲ್ಲೇ ಎಲ್ಲ ಮಾದರಿಗಳಿಗೆ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಆದರೆ, ತಾವು ಸದ್ಯಕ್ಕೆ ಅಂತಾರಾಷ್ಟ್ರೀಯ ಟಿ20ಗೆ ಮಾತ್ರ ನಿವೃತ್ತಿ ಘೋಷಣೆ ಮಾಡಿದ್ದು, ಏಕದಿನ ಮತ್ತು ಟೆಸ್ಟ್ನಲ್ಲಿ ಆಡುವುದನ್ನು ತಾವುಗಳೆಲ್ಲ ನೋಡುತ್ತೀರಿ ಎಂದಿದ್ದಾರೆ. ಅವರ ಈ ಹೇಳಿಕೆ ಜಾಲತಾಣದಲ್ಲಿ ವೈರಲ್ ಆಗಿದೆ. ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಗೆ ಸದ್ಯಕ್ಕೆ ನಿವೃತ್ತಿ ಘೋಷಣೆ ಮಾಡುವುದಿಲ್ಲ ಎಂಬ ಸುಳಿವು ಕೊಡುತ್ತಿದ್ದಂತೆ ಕ್ರಿಕೆಟ್ ಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.