ನವದೆಹಲಿ: ಆಡಳಿತರೂಢ ಬಿಜೆಪಿ ಹರಿಯಾಣದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರು ಈ ಚುನಾವಣೆ ಫಲಿತಾಂಶ “ದೊಡ್ಡ ಪಾಠ” ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ “ಅತಿಯಾದ ಆತ್ಮವಿಶ್ವಾಸ” ಇರಬಾರದು. ಚುನಾವಣೆಯಲ್ಲಿ ಯಾರೊಬ್ಬರೂ ಯಾವತ್ತೂ ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರಬಾರದು ಎಂಬುದಕ್ಕೆ ಹರಿಯಾಣದ ಫಲಿತಾಂಶ ದೊಡ್ಡ ಪಾಠ” ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ.
ಎಎಪಿ ಪುರಸಭೆ ಕೌನ್ಸಿಲರ್‌ಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, “ಯಾವುದೇ ಚುನಾವಣೆಯನ್ನು ಲಘುವಾಗಿ ಪರಿಗಣಿಸಬಾರದು. ಪ್ರತಿ ಚುನಾವಣೆ ಮತ್ತು ಪ್ರತಿ ಸ್ಥಾನವು ಕಠಿಣವಾಗಿರುತ್ತದೆ” ಎಂದು ಹೇಳಿದರು
ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಹೆಚ್ಚು ಶ್ರಮಿಸಬೇಕು ಎಂದು ಪಕ್ಷದ ಕೌನ್ಸಿಲರ್‌ಗಳು ಕರೆ ನೀಡಿದ ಕೇಜ್ರಿವಾಲ್ ಅವರು, ತಮ್ಮ ವಾರ್ಡ್‌ಗಳಿಂದ ಕಸವನ್ನು ಸರಿಯಾಗಿ ಸಂಗ್ರಹಿಸಿ ವಿಲೇವಾರಿ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದರು.
ಎಎಪಿಯು ಸ್ಪರ್ಧಿಸಲಿರುವ ಸ್ಥಾನಗಳ ಸಂಖ್ಯೆಯ ಬಗ್ಗೆ ಭಿನ್ನಾಭಿಪ್ರಾಯದಿಂದಾಗಿ ಹರಿಯಾಣದಲ್ಲಿ ಕಾಂಗ್ರೆಸ್‌ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. 9 ಸ್ಥಾನಗಳನ್ನು ನೀಡಬೇಕೆಂಬ ಎಎಪಿ ಬೇಡಿಕೆಯನ್ನು ಕಾಂಗ್ರೆಸ್ ತಿರಸ್ಕರಿಸಿದ ನಂತರ ರಾಜ್ಯದ ಒಟ್ಟು 90 ಸ್ಥಾನಗಳಲ್ಲಿ 89 ರಲ್ಲಿ ಆಪ್ ಸ್ವತಂತ್ರವಾಗಿ ಸ್ಪರ್ಧಿಸಿತ್ತು.