ನನ್ನ ತಂಗಿಗೆ ಕ್ಯಾನ್ಸರ್… ಗೆಲುವಿನ ಬಳಿಕ ಭಾವುಕರಾದ Akash Deep.

ನನ್ನ ತಂಗಿಗೆ ಕ್ಯಾನ್ಸರ್… ಗೆಲುವಿನ ಬಳಿಕ ಭಾವುಕರಾದ Akash Deep.

ಹೆಡಿಂಗ್ಲೆಯಲ್ಲಿ ಭಾರತದ ವಿರುದ್ಧ ಗೆದ್ದು ಬೀಗಿದ್ದ ಇಂಗ್ಲೆಂಡ್ ತಂಡಕ್ಕೆ ಟೀಮ್ ಇಂಡಿಯಾ ತಿರುಗೇಟು ನೀಡಿದೆ. ಅದು ಕೂಡ ಬರೋಬ್ಬರಿ 336 ರನ್ಗಳ ಅಮೋಘ ಗೆಲುವು ದಾಖಲಿಸುವ ಮೂಲಕ. ಈ ಮೂಲಕ 5 ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ 1-1 ಅಂತರದಿಂದ ಸಮಬಲಗೊಳಿಸಿದೆ.

ಬರೋಬ್ಬರಿ 58 ವರ್ಷಗಳ ಬಳಿಕ ಭಾರತ ತಂಡವು ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿದೆ. ಟೀಮ್ ಇಂಡಿಯಾದ ಈ ಗೆಲುವಿನ ರೂವಾರಿಗಳಲ್ಲಿ ಆಕಾಶ್ ದೀಪ್ ಕೂಡ ಒಬ್ಬರು. ಏಕೆಂದರೆ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದ್ದ ಆಕಾಶ್ ದೀಪ್ ದ್ವಿತೀಯ ಇನಿಂಗ್ಸ್ನಲ್ಲಿ 6 ವಿಕೆಟ್ ಉರುಳಿಸಿದರು. ಈ ಮೂಲಕ ಒಟ್ಟು 10 ವಿಕೆಟ್ ಪಡೆದು ಭಾರತ ತಂಡಕ್ಕೆ 336 ರನ್ಗಳ ಐತಿಹಾಸಿಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ವಿಶೇಷ ಎಂದರೆ ಇದು ಅಕಾಶ್ ದೀಪ್ ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವಾಗಿದೆ.

ಈ ಭರ್ಜರಿ ಪ್ರದರ್ಶನವನ್ನು ಆಕಾಶ್ ದೀಪ್  ಕಳೆದ ಎರಡು ತಿಂಗಳಿನಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತನ್ನ ಸಹೋದರಿಗೆ ಅರ್ಪಿಸಿದ್ದಾರೆ. ಪಂದ್ಯದ ಬಳಿಕ ಜಿಯೋ ಹಾಟ್ಸ್ಟಾರ್ನಲ್ಲಿ ಚೇತೇಶ್ವರ ಪೂಜಾರ ಅವರೊಂದಿಗೆ ಮಾತನಾಡಿದ ಆಕಾಶ್ ದೀಪ್, ‘ನಾನು ಇದರ ಬಗ್ಗೆ ಯಾರೊಂದಿಗೂ ಮಾತನಾಡಿಲ್ಲ, ಆದರೆ ಎರಡು ತಿಂಗಳ ಹಿಂದೆ ನನ್ನ ಸಹೋದರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರು ನನ್ನ ಪ್ರದರ್ಶನದಿಂದ ತುಂಬಾ ಸಂತೋಷಪಡುತ್ತಾರೆ. ಇದು ಅವರ ಮುಖದಲ್ಲಿ ಮತ್ತೆ ನಗು ತರಿಸುತ್ತದೆ’ ಎಂದು ಹೇಳಿದರು.

ನಾನು ಚೆಂಡನ್ನು ಕೈಗೆತ್ತಿಕೊಂಡಾಗಲೆಲ್ಲಾ ಅವಳ ಆಲೋಚನೆಗಳು ಮತ್ತು ಚಿತ್ರಗಳು ನನ್ನ ಮನಸ್ಸಿನಲ್ಲಿ ಹಾದು ಹೋಗುತ್ತಿದ್ದವು. ಈ ಪ್ರದರ್ಶನ ಅವಳಿಗೆ ಸಮರ್ಪಿತವಾಗಿದೆ. ಸಹೋದರಿ, ನಾವೆಲ್ಲರೂ ನಿಮ್ಮೊಂದಿಗಿದ್ದೇವೆ ಎಂದು ನಾನು ಅವಳಿಗೆ ಹೇಳಲು ಬಯಸುತ್ತೇನೆ” ಎಂದು ಆಕಾಶ್ ದೀಪ್ ಇದೇ ವೇಳೆ ತಿಳಿಸಿದರು.

ಇನ್ನು ಈ ಪಂದ್ಯದಲ್ಲಿನ ಪ್ರದರ್ಶನ ಬಗ್ಗೆ ಮಾತನಾಡಿದ ಆಕಾಶ್ ದೀಪ್,  ತಾನು ಮಾಡಿದ ಯೋಜನೆಗಳು ಮತ್ತು ಪ್ರಕ್ರಿಯೆಗಳು ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಂತೋಷ ವ್ಯಕ್ತಪಡಿಸಿದರು. ಚೆಂಡನ್ನು ಹಾರ್ಡ್ ಲೆಂತ್ನಲ್ಲಿ ಸೀಮ್ ಮಾಡಿ ಒಳಮುಖವಾಗಿ ತಿರುಗಿಸುವುದು ನನ್ನ ಮುಖ್ಯ ಗುರಿಯಾಗಿತ್ತು. ಜೋ ರೂಟ್ ವಿಷಯದಲ್ಲಿ ಇದು ಸಂಭವಿಸಿತು.

ಕ್ರೀಸ್ನ ಹೊರಗಿನಿಂದ ಬೌಲಿಂಗ್ ಮಾಡುವ ಮೂಲಕ ಚೆಂಡನ್ನು ತೆಗೆದುಕೊಂಡು ಹೋಗುವುದು ನನ್ನ ಪ್ರಯತ್ನವಾಗಿತ್ತು. ಹ್ಯಾರಿ ಬ್ರೂಕ್ ವಿಷಯದಲ್ಲಿ, ಅವರು ಬ್ಯಾಕ್ಫೂಟ್ನಲ್ಲಿ ನೆಲೆಸಿದ್ದಾರೆಂದು ನನಗೆ ತಿಳಿದಿತ್ತು.  ನಾನು ಚೆಂಡನ್ನು ಸೀಮ್ ಮಾಡಿ ಒಳಮುಖವಾಗಿ ತಿರುಗಿಸಲು ಬಯಸಿದ್ದೆ. ಅದರಂತೆ ಬ್ರೂಕ್ ವಿಕೆಟ್ ಕೂಡ ಸಿಕ್ಕಿತ್ತು.

ಒಟ್ಟಾರೆಯಾಗಿ ನನ್ನ ಪ್ರದರ್ಶನದ ಬಗ್ಗೆ ತುಂಬಾ ಖುಷಿಯಿದೆ. ಇದೇ ಪ್ರದರ್ಶನವನ್ನು ಲಾರ್ಡ್ಸ್ ಮೈದಾನದಲ್ಲೂ ಮುಂದುವರೆಸುವ ವಿಶ್ವಾಸವಿದೆ. ಏಕೆಂದರೆ ಆ ಪಿಚ್ ಇಲ್ಲಿಗಿಂತ  ಹೆಚ್ಚು ಭಿನ್ನವಾಗಿರುವುದಿಲ್ಲ ಎಂಬುದು ನನ್ನ ಭಾವನೆ. ಹೀಗಾಗಿ ಮೂರನೇ ಟೆಸ್ಟ್ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಆಕಾಶ್ ದೀಪ್ ಹೇಳಿದ್ದಾರೆ.

Leave a Reply

Your email address will not be published. Required fields are marked *