ಅಕ್ರಮ ಕೇರಳ ಲಾಟರಿ ಜಾಲ ಭೇದಿಸಿದ ಮೈಸೂರು ಪೊಲೀಸರು.

ಅಕ್ರಮ ಕೇರಳ ಲಾಟರಿ ಜಾಲ ಭೇದಿಸಿದ ಮೈಸೂರು ಪೊಲೀಸರು.

ಪಿರಿಯಾಪಟ್ಟಣದಲ್ಲಿ ಇಬ್ಬರ ಬಂಧನ, ಲಕ್ಷಾಂತರ ಮೌಲ್ಯದ ಟಿಕೆಟ್ ಜಪ್ತಿ.

ಮೈಸೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಅಕ್ರಮವಾಗಿ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಜಾಲವನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ವಿಶೇಷ ತಂಡ ಪತ್ತೆಹಚ್ಚಿ ಭರ್ಜರಿ ಕಾರ್ಯಾಚರಣೆ ನಡೆಸಿದೆ.ಪಿರಿಯಾಪಟ್ಟಣದಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಅರುಣ್ ಕುಮಾರ್ ಹಾಗೂ ಸ್ವಾಮಿ ಎಂದು ಹೇಳಲಾಗಿದೆ. ಅರುಣ್ ಕುಮಾರ್ ಪಿರಿಯಾಪಟ್ಟಣದ ವೆಂಕಟೇಶ್ವರ ವೇ ಬ್ರಿಡ್ಜ್ ಬಳಿ ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ. ಸ್ವಾಮಿಯನ್ನು ಪಿರಿಯಾಪಟ್ಟಣದ ಸಿಂಚನ ಹೋಟೆಲ್‌ನಲ್ಲಿ ಲಾಟರಿ ಮಾರಾಟ ಮಾಡುತ್ತಿದ್ದ ವೇಳೆ ಬಂಧಿಸಲಾಗಿದೆ.

ಪೊಲೀಸರು ಬಂಧಿತರಿಂದ ಒಟ್ಟು 78,130 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಒಟ್ಟು 55,200 ರೂ. ಮೌಲ್ಯದ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಗಳಿಂದ ಅರುಣ್ ಕುಮಾರ್‌ನಿಂದ 33,000 ರೂ. ಮತ್ತು ಸ್ವಾಮಿಯಿಂದ 22,200 ರೂ. ಮೌಲ್ಯದ ಟಿಕೆಟ್ ವಶಪಡಿಸಿಕೊಳ್ಳಲಾಗಿದೆ. ಇನ್ನು ಆರೋಪಿಗಳಿಂದ ಒಟ್ಟು 22,930 ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ಅರುಣ್ ಕುಮಾರ್‌ನಿಂದ 20,000 ರೂ. ಹಾಗೂ ಸ್ವಾಮಿಯಿಂದ 2,930 ರೂ. ಹಣವನ್ನು ಪೊಲೀಸರು ವಶಪಡಿದಿದ್ದಾರೆ.

ಮೈಸೂರು ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರ ಮಾರ್ಗದರ್ಶನದಲ್ಲಿ ಮತ್ತು ಅಡಿಷನಲ್ ಎಸ್‌ಪಿ ಮಲ್ಲಿಕ್ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಈ ತಂಡದಲ್ಲಿ ಇನ್ಸ್‌ಪೆಕ್ಟರ್ ಗೋವಿಂದರಾಜು ಮತ್ತು ಪಿಎಸ್‌ಐ ಜಗದೀಶ್ ಹಾಗೂ ಎಸ್‌ಪಿ ಸ್ಕ್ವ್ಯಾಡ್ ಸಿಬ್ಬಂದಿ ಪಾಲ್ಗೊಂಡಿದ್ದರು. ಕರ್ನಾಟಕದಲ್ಲಿ ಲಾಟರಿ ಮಾರಾಟವನ್ನು ನಿಷೇಧಿಸಲಾಗಿದ್ದರೂ, ಗಡಿ ಭಾಗದ ಮೂಲಕ ಕೇರಳ ಲಾಟರಿಯನ್ನು ತಂದು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *