ಮೈಸೂರು: ವಿಶೇಷಚೇತನ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದ 47 ವರ್ಷದ ನಿವಾಸಿ ಕುಮಾರ ಶಿಕ್ಷೆಗೆ ಗುರಿಯಾದ ಅಪರಾಧಿ.
2022ರಂದು 19 ವರ್ಷದ ಯುವತಿ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಕುಮಾರ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಈ ಸಂಬಂಧ ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಬೈಲಕುಪ್ಪೆ ಠಾಣೆ ಪೊಲೀಸರು, ಪ್ರಕರಣ ದಾಖಸಿಕೊಂಡು ಆರೋಪಿ ವಿರುದ್ಧ ತನಿಖೆ ಕೈಗೊಂಡು ದೋಷಾರೋಪಣಾ ಪತ್ರ ಸಲ್ಲಿಸಿಕೊಂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ರಮೇಶ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸಕಾ್ರಿ ಅಭಿಯೋಜಕ ಕೆ.ನಾಗರಾಜ ವಾದ ಮಂಡಿಸಿದ್ದರು.
ಇತರ ಕ್ರೈಂ ಸುದ್ದಿಗಳು: ಸರ್ವೀಸ್‌ಗೆ ಕೊಟ್ಟಿದ್ದ ಸಬ್‌ಮರ್ಸಿಬಲ್ ಮೋಟಾರ್(ಪಂಪ್)ಗಳನ್ನು ಕಳವು ಮಾಡುತ್ತಿದ್ದ ನಾಲ್ವರು ಖದೀಮರನ್ನು ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ನೆಹರು ನಗರದ 7ನೇ ಕ್ರಾಸ್ ನಿವಾಸಿ ಜಾಫರ್ ಸಾದೀಕ್ ಅಲಿಯಾಸ್ ಬಾಬ(24), ರಾಘವೇಂದ್ರನಗರ 7ನೇ ಕ್ರಾಸ್‌ನ ಮಹಮ್ಮದ್ ಮೊಹೀದ್ದಿನ್ ಅಲಿಯಾಸ್ ಬಿಹಾರಿ(35), ಭಾರತ್‌ನಗರದ ಅಬ್ದುಲ್ ಜಮೀಲ್ ಅಲಿಯಾಸ್ ಪಿ.ಕೆ(25) ಹಾಗೂ ತನ್ವೀರ್‌ಸೇಠ್ ನಗರ 1ನೇ ಕ್ರಾಸ್‌ನ ನಯಾಜ್ ಖಾನ್ ಅಲಿಯಾಸ್ ಬೆಂಗಳೂರಿ ಬಂಧಿತ ಆರೋಪಿಗಳಾಗಿದ್ದು, ಗುರುವಾರ ಬೆಳಗ್ಗೆ ಠಾಣೆ ವ್ಯಾಪ್ತಿಯ ಭಾರತ್‌ನಗರದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾರೆ.
ಅಶೋಕ ಲೈಲ್ಯಾಂಡ್ ಗೂಡ್ಸ್(ಕೆಎ-46-5438) ವಾಹನದಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದ ಹಿನ್ನೆಲೆ ತಡೆದು ತಪಾಸಣೆ ನಡೆಸಿದಾಗ ವಾಹನದಲ್ಲಿದ್ದ 4 ಸಬ್‌ಮರ್ಸಿಬಲ್ ಮೋಟಾರ್ ಕಳ್ಳತನ ಮಾಡಿರುವುದು ಗೊತ್ತಾಗಿದೆ. ನಂತರ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಬಂಧಿತ ಆರೋಪಿಗಳು, ಕಳ್ಳತನವನ್ನು ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ 11 ಸಬ್‌ಮರ್ಸಿಬಲ್ ಮೋಟಾರ್‌ಗಳು, 18 ಸಾವಿರ ರೂ.ನಗದು, 1 ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ, 1 ಅಪೇ ಆಟೋ, ಟಾಟಾ ಇಂಡಿಕಾ ಕಾರ್, ಪಾಸೆಂಜರ್ ಆಟೋ ಹಾಗೂ ಕಮರ್ಷಿಯಲ್ ಸಿಲಿಂಡರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಎಸ್‌ಪಿ ಎಲ್.ನಾಗೇಶ್ ನೇತೃತ್ವದಲ್ಲಿ ಪಿಐ ಡಾ.ಎಂ.ಎಲ್.ಶೇಖರ್, ಪಿಎಸ್‌ಐ ಕೆ.ಎ.ಚಂದ್ರ, ಎಎಸ್‌ಐ ಸತೀಶ್, ಸಿಬ್ಬಂದಿ ಅಬ್ದುಲ್ ಲತೀಫ್, ಭಾಸ್ಕರ್, ಅಶೋಕ, ಸಿ.ಕೆ.ಮಹೇಶ್, ವಿಶ್ವನಾಥ್, ಸುನೀಲ್ ಕುಮಾರ್ ಮತ್ತು ಚಾಲಕ ಸಂಜಯ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ದೇವಸ್ಥಾನದಲ್ಲಿ ಕಳ್ಳತನ: ಮೈಸೂರು ತಾಲೀಕಿನ ಸಜ್ಜೆಹುಂಡಿಯ ಲಕ್ಷ್ಮಿ ದೇವಿ ದೇವಾಲಯದ ಬಾಗಿಲ ಬೀಗವನ್ನು ಮುರಿದು ಒಳ ನುಗ್ಗಿರುವ ಕಳ್ಳರು, ಹುಂಡಿ ಹಣ ಸೇರಿದಂತೆ 6.98 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ತಾಲೂಕಿನ ಸಜ್ಜೆಹುಂಡಿ ಗ್ರಾಮದಲ್ಲಿ ನಡೆದಿದೆ. ವರುಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.