ದಕ್ಷಿಣ ಕನ್ನಡ|| ಅರಣ್ಯದೊಳಗಿದೆ ಒಂದು ವಿಸ್ಮಯ : ಅಚ್ಚರಿ ಮೂಡಿಸಿದ ಬಾವಿ

ದಕ್ಷಿಣ ಕನ್ನಡ : ಪ್ರಕೃತಿಯಲ್ಲಿ ಹಲವಾರು ವಿಸ್ಮಯಗಳನ್ನು ನಾವು ದಿನಂಪ್ರತಿ ನೋಡುತ್ತಲೇ ಇರುತ್ತೇವೆ. ಇವುಗಳಲ್ಲಿ ಕೆಲವೊಂದು ನಾವು ನಿತ್ಯ ಕಾಣುವ ವಿಷಯಗಳಾಗಿದ್ದರೂ ಅದರ ವಿಶೇಷತೆ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಅದರಂತೆ ಸುಳ್ಯದ ಅರಣ್ಯ ಪ್ರದೇಶದೊಳಗೊಂದು ನೂರಾರು ಎಕ್ರೆ ಪ್ರದೇಶಗಳಿಂದ ಹರಿದು ಬರುವ ನೀರು ಒಂದೆಡೆ ಸೇರುತ್ತಿದ್ದು, ನೀರು ಸೇರುವ ಜಾಗ ಮತ್ತು ಈ ನೀರು ಯಾವ ಕಡೆಗೆ ಹೋಗುತ್ತಿದೆ ಎಂಬುದು ಮಾತ್ರ ವಿಸ್ಮಯವಾಗಿದೆ.

ಸುಳ್ಯದ ಅಜ್ಜಾವರ ಗ್ರಾಮದ ನಾರ್ಕೋಡು- ಅಜ್ಜಾವರ ರಸ್ತೆಯ ಮೇನಾಲದ ಮದಿನಡ್ಕ ಅರಣ್ಯ ಪ್ರದೇಶದಲ್ಲಿ ಈ ವಿಸ್ಮಯವನ್ನು ನಾವು ಕಾಣಬಹುದಾಗಿದೆ. ಇದು ಮಳೆಗಾಲದಲ್ಲಿ ಮಾತ್ರ ಕಾಣಬಹುದಾದ ಒಂದು ಕುತೂಹಲದ ಸ್ಥಳವಾಗಿದೆ. ಮೇದಿನಡ್ಕ ಅರಣ್ಯ ಪ್ರದೇಶ ಹಾಗೂ ಆಸುಪಾಸಿನ ಸುಮಾರು 150-200 ಎಕ್ರೆ ಪ್ರದೇಶದ ಒಸರು ನೀರು ಮಳೆಗಾಲದಲ್ಲಿ ಚಿಕ್ಕ ನದಿಯಾಗಿ ಹರಿದು ಬಂದು ಆರಣ್ಯದೊಳಗಿನ ಈ ಬಾವಿ ಆಕೃತಿಯ ಗುಂಡಿಗೆ ಸೇರುತ್ತಿದೆ. ಮಳೆಗಾಲದಲ್ಲಿ ನೋಡಲು ತುಂಬಾ ಆಕರ್ಷಿತವಾಗಿದೆ.

ಇದೇ ಪರಿಸರದಲ್ಲಿ ವಿಶಾಲವಾದ ಮೈದಾನದಂತಿರುವ ಜಾಗವಿದ್ದು ನಿಖರವಾಗಿ ತಿಳಿದುಬಾರದಿದ್ದರೂ ಒಂದು ರೀತಿಯ ವಿವಿಧ ಆಕೃತಿಗಳು ಗೋಚರಿಸುತ್ತಿವೆ. ಹಸು-ಕರು, ಆನೆ, ರೇಖೆಗಳು, ಚೆನ್ನೆಮಣೆಯಂತೆ ಕಾಣುತ್ತವೆ ಎಂಬುದು ಸ್ಥಳೀಯರ ಅಭಿಪ್ರಾಯ. ಒಟ್ಟಿನಲ್ಲಿ ಮೆದಿನಡ್ಕ ಪ್ರದೇಶದ ಈ ವಿಸ್ಮಯ ಬಾವಿ, ವಿಸ್ಮಯ ವಿಶಾಲ ಮೈದಾನವು ಕುತೂಹಲದಂತಿದ್ದು, ಜತೆಗೆ ಈ ಭಾಗದಲ್ಲೇ ಇನ್ನೂ ಎರಡು ಈ ರೀತಿಯ ಬಾವಿಗಳಿವೆ ಎನ್ನಲಾಗಿದೆ. ಹಚ್ಚ ಹಸಿರಿನ ಈ ಪ್ರದೇಶದ ಬಗ್ಗೆ ಹಿರಿಯರ ಅಭಿಪ್ರಾಯ ಮತ್ತು ವೈಜ್ಞಾನಿಕವಾಗಿ ವಿಶೇಷ ಅಧ್ಯಯನ ಸಂಶೋಧನೆಗಳು ನಡೆದಲ್ಲಿ ಜನರ ಸಂಶಯ, ನಿಗೂಢತೆಗಳಿಗೆ ಉತ್ತರ ಸಿಗಬಹುದು ಎನ್ನುತ್ತಾರೆ ಸ್ಥಳೀಯರು.

ಹೇಗಿದೆ ಬಾವಿ?: ಅರಣ್ಯ ಪ್ರದೇಶದೊಳಗೆ ಈ ಪುರಾತನ ರೀತಿಯ ಬಾವಿಯಿದೆ. ಅರಣ್ಯ ಪ್ರದೇಶದ ಎತ್ತರದ ಪ್ರದೇಶದಿಂದ ನೀರು ಹರಿದು ಬಂದು ಈ ಬಾವಿಗೆ ಸೇರುತ್ತಿದೆ. ಮೆದಿನಡ್ಕದ ಅರಣ್ಯ ಪ್ರದೇಶದಲ್ಲಿ ವಿವಿಧ ಭಾಗದ ನೀರು ಈ ಬಾವಿಗೆ ಸೇರುತ್ತದೆ. ಈ ಬಾವಿ ವೃತ್ತಾಕಾರದಲ್ಲಿದ್ದು, ಬಂಡೆ ಕಲ್ಲು, ಮುರ ಕಲ್ಲಿನಿಂದ ಕೆತ್ತಿ ನಿರ್ಮಿಸಿದಂತೆ ಕಾಣುತ್ತದೆ. ಸುಮಾರು 20-25 ಅಡಿ ಆಳವಿರುವ ಈ ಬಾವಿಯ ಅಡಿ ಭಾಗದಲ್ಲಿ ಸೆಳೆಯಂತಿದೆ.

ವಿಶೇಷವೆಂದರೆ ಮಳೆಗಾಲದಲ್ಲಿ ನಿರಂತರವಾಗಿ ಹರಿಯುವ ಇಷ್ಟೊಂದು ಪ್ರಮಾಣದ ನೀರು ಸೇರುತ್ತಿದ್ದರೂ, ಈ ಬಾವಿ ಮಾತ್ರ ತುಂಬುತ್ತಿಲ್ಲ. ಬಾವಿಯೊಳಗಿನಿಂದ ನೀರು ಬೇರೆಡೆಗೆ ಹರಿದು ಸಾಗುತ್ತಿದ್ದು, ಎಲ್ಲಿಗೆ ಸೇರುತ್ತದೆ ಎಂಬ ಸ್ಪಷ್ಟ ಮಾಹಿತಿ ಯಾರಲ್ಲೂ ಇಲ್ಲ. ಬಾವಿಗೆ ಸೇರುವ ನೀರು ತುದಿಯಡ್ಕ ಬೈಲು ಎಂಬಲ್ಲಿಗೆ ಸೇರುತ್ತದೆ ಎಂದು ಕೆಲವರು ತಿಳಿಸಿದರೆ, ಪಯಸ್ವಿನಿ ನದಿಗೆ ಸೇರುತ್ತದೆ ಎಂದು ಇನ್ನು ಕೆಲವರು ಹೇಳುತ್ತಾರೆ. ಆದರೆ ಸ್ಪಷ್ಟತೆ ಇಲ್ಲ. ಬೇಸಿಗೆಯಲ್ಲಿ ಈ ಬಾವಿ ಹಾಗೂ ಸುತ್ತ ಮುತ್ತಲ ಪ್ರದೇಶ ನೀರೇ ಇಲ್ಲದೆ ಬರಡಾಗಿರುತ್ತದೆ.

Leave a Reply

Your email address will not be published. Required fields are marked *