ಬೆಂಗಳೂರು: ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗ್ರ್ಯಾಂಡ್ ಚಾಯ್ಸ್ ಲಾಡ್ಜ್‌ನಲ್ಲಿ ಮಂಗಳೂರಿನ ಪುತ್ತೂರು ಮೂಲದ ತಕ್ಷಿತ್ (20) ಎಂಬ ಯುವಕ ನಿಗೂಢವಾಗಿ ಸಾವನ್ನಪ್ಪಿದ್ದು, ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಯುವಕನ ಮೃತದೇಹ ಲಾಡ್ಜ್‌ನ ರೂಮೊಂದರಲ್ಲಿ ಪತ್ತೆಯಾಗಿದೆ.
ಮಡಿವಾಳ ಪೊಲೀಸರು ಈ ಪ್ರಕರಣದ ಬಗ್ಗೆ ತೀವ್ರ ತನಿಖೆ ನಡೆಸಿದ್ದಾರೆ.ಅಕ್ಟೋಬರ್ 9ರಂದು ತಕ್ಷಿತ್ ತನ್ನ ಪ್ರೇಯಸಿ, ವಿರಾಜಪೇಟೆಯ ಪ್ರಿಯಾಂಕಾ ಜೊತೆ ಬೆಂಗಳೂರಿಗೆ ಬಂದಿದ್ದನು. ಅಂದಿನಿಂದ ಇವರಿಬ್ಬರೂ ಗ್ರ್ಯಾಂಡ್ ಚಾಯ್ಸ್ ಲಾಡ್ಜ್‌ನಲ್ಲಿ ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು. ಕಳೆದ ಎಂಟು ದಿನಗಳಿಂದ ಇಬ್ಬರೂ ಹೊರಗೆ ಹೋಗದೆ, ತಿಂಡಿ ಊಟವನ್ನು ಸ್ವಿಗ್ಗಿ ಸೇರಿದಂತೆ ಆನ್ಲೈನ್ನಲ್ಲೇ ತರಿಸಿಕೊಂಡು ರೂಮ್ನಲ್ಲೇ ಊಟ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಘಟನೆ ನಡೆದ ದಿನವೂ ಸಹ ಇವರಿಬ್ಬರೂ ಆನ್‌ಲೈನ್ ಮೂಲಕ ಊಟ ತರಿಸಿಕೊಂಡಿದ್ದರು.
ಊಟ ಮಾಡಿದ ನಂತರ ಇಬ್ಬರಿಗೂ ಫುಡ್ ಪಾಯ್ಸನ್ ಆಗಿರುವ ಲಕ್ಷಣಗಳು ಕಂಡುಬಂದಿದ್ದವು ಎಂದು ಹೇಳಲಾಗಿದೆ. ಫುಡ್ ಪಾಯ್ಸನ್ ಆದ ನಂತರ ಪ್ರೇಯಸಿ ಪ್ರಿಯಾಂಕಾ ಲಾಡ್ಜ್ ತೊರೆದಿದ್ದಾಳೆ. ಪ್ರಿಯಾಂಕಾ ಹೊರಟುಹೋದ ನಂತರ ತಕ್ಷಿತ್ ರೂಮ್ನಿಂದ ಹೊರಬಂದಿರಲಿಲ್ಲ. ಯುವಕ ಕೊಠಡಿಯಿಂದ ಹೊರಬಾರದ ಕಾರಣ ಲಾಡ್ಜ್ ಸಿಬ್ಬಂದಿಗೆ ಅನುಮಾನ ಬಂದಿದೆ. ನಂತರ ಅವರು ಮಾಸ್ಟರ್ ಕೀ ಬಳಸಿ ಕೊಠಡಿ ಬಾಗಿಲು ತೆರೆದು ನೋಡಿದಾಗ, ತಕ್ಷಿತ್ ಮೃತದೇಹ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತಕ್ಷಿತ್ ಮೃತಪಟ್ಟಾಗ ಪ್ರಿಯಾಂಕಾ ರೂಮ್ನಲ್ಲೇ ಇದ್ದಳಾ? ಪ್ರಿಯಾಂಕಾ ಜಗಳವಾಡಿಕೊಂಡು ಹೊರಟು ಹೋದ ನಂತರ ತಕ್ಷಿತ್ ನಿರಾಶೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆಯೇ? ಅಥವಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾನಾ? ಎನ್ನುವ ಹಲವಾರು ಪ್ರಶ್ನೆಗಳು ಉದ್ಭವಿಸಿವೆ. ಇದರ ಜತೆಗೆ ಈ ತನಿಖೆ ಊಟ ಸೇವನೆಯಿಂದಲ್ಲೇ ಸಾವಿಗೆ ಕಾರಣವಾಗಿರಬಹುದೇ ಎಂಬ ದೃಷ್ಟಿಯಿಂದಲ್ಲೂ ನಡೆಯುತ್ತಿದೆ. ಮಡಿವಾಳ ಠಾಣಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರವಾದ ಕಾರಣ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ನಂತರವೇ ತನಿಖೆಗೆ ಹೊಸ ದಿಕ್ಕು ಸಿಗಲಿದ್ದು, ಸಾವಿನ ಹಿಂದಿನ ಸತ್ಯಾಸತ್ಯತೆ ಬಹಿರಂಗವಾಗಲಿದೆ. ಪ್ರಿಯಾಂಕಾಳನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸುವ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
For More Updates Join our WhatsApp Group :

