ನಾಗ್ಪುರ: ಮೊಘಲ್ ದೊರೆ ಔರಂಗಜೇಬ್ ಸಮಾಧಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗಿದ್ದು, ನಾಗ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಘಟನೆಯಲ್ಲಿ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದ್ದು, ಆರು ಮಂದಿ ಸಾರ್ವಜನಿಕರು, ಮೂವರು ಪೊಲೀಸರು ಸೇರಿದಂತೆ ಒಟ್ಟು 9 ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಪ್ರತಿಭಟನೆ ವೇಳೆ ಧರ್ಮಗ್ರಂಥ ಕುರಾನ್ ಸುಡಲಾಗಿದೆ ಎಂದು ವದಂತಿ ಹಬ್ಬಿಸಲಾಗಿದ್ದು, ಇದರಿಂದಾಗಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಔರಂಗಜೇಬ್ ನೋವು ಮತ್ತು ಗುಲಾಮಗಿರಿಯ ಸಂಕೇತ. ಹೀಗಾಗಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬ್ ಸಮಾಧಿ ತೆರವುಗೊಳಿಸಬೇಕು ಎಂದು ವಿಎಚ್ಪಿ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಸೋಮವಾರ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಸಿದ್ದವು. ಜೊತೆಗೆ ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಕೂಡಾ ಸಲ್ಲಿಸಿದ್ದವು.
ಅದರ ಬೆನ್ನಲ್ಲೆ ನಾಗಪುರದಲ್ಲಿ ಸೋಮವಾರ ಸಂಜೆ ನಡೆದ ಪ್ರತಿಭಟನೆ ವೇಳೆ ಕುರಾನ್ ಪ್ರತಿಯನ್ನು ಸುಡಲಾಗಿದೆ ಎಂಬ ವದಂತಿಯೊಂದು ಕಾಡ್ಗಿಚ್ಚಿನಂತೆ ಹರಡಿದ್ದು, ಇದರಿಂದ ಹಿಂಸಾಚಾರ ನಡೆದಿದೆ.
ಹಿಂಸಾಚಾರದ ವೇಳೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಹಿಂಸಾಚಾರ ತಡೆಗೆ ಪೊಲೀಸರು ಆಶ್ರುವಾಯು ಸಿಡಿಸಿ, ಲಾಠಿಪ್ರಹಾರ ನಡೆಸಿದ್ದಾರೆ. ಈ ವೇಳೆ ಹಲವರು ಗಾಯಗೊಂಡಿದ್ದಾರೆ.
ನಿನ್ನೆ ಸಂಜೆ ಇಡೀ ನಾಗ್ಪುರ್ನಲ್ಲಿ ಪತ್ಥರ್ಬಾಜಿ ನಡೆದಿದೆ. ದೊಣ್ಣೆಗಳನ್ನ ಹಿಡಿದು ರಸ್ತೆಗಳಲ್ಲಿ ದಾಂಧಲೆ ನಡೆಸಲಾಗಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.. ವದಂತಿಗೆ ಯಾರೂ ಕಿವಿಗೊಡದೇ, ಶಾಂತಿ ಕಾಪಾಡುವಂತೆ ನಾಗ್ಪುರ್ ಲೋಕಲ್ ಲೀಡರ್ಸ್ ಕೇಂದ್ರ ಸಚಿವ ಗಡ್ಕರಿ ಮತ್ತು ಸಿಎಂ ಫಡ್ನವೀಸ್ ಮನವಿ ಮಾಡಿದ್ದಾರೆ.
ನಾವು ಪೊಲೀಸ್ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ನಾಗರಿಕರು ಅವರೊಂದಿಗೆ ಸಹಕರಿಸಬೇಕು. ನಾಗ್ಪುರ ಶಾಂತಿಯುತ ಮತ್ತು ಸಹಕಾರಿ ನಗರವಾಗಿದೆ. ಇದು ಇಲ್ಲಿನ ಶಾಶ್ವತ ಸಂಪ್ರದಾಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ವದಂತಿಗಳನ್ನು ನಂಬದೇ ಆಡಳಿತಕ್ಕೆ ಪೂರ್ಣ ಸಹಕಾರ ನೀಡಿ ಎಂದು ದೇವೇಂದ್ರ ಫಡ್ನವೀಸ್ ಅವರು ಹೇಳಿದ್ದಾರೆ.
ಈ ನಡುವೆ ಹಿಂದೂ ಸಂಘಟನೆಗಳಿಂದ ಸಮಾಧಿ ತೆರವಿಗೆ ಆಗ್ರಹ ಕೇಳಿಬಂದ ಬೆನ್ನಲ್ಲೇ ಸಮಾಧಿ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಸಮಾಧಿಗೆ ಭೇಟಿ ನೀಡುವವರ ನೋಂದಣಿ, ಗುರುತಿನ ಚೀಟಿ ಪರಿಶೀಲನೆ ಕಡ್ಡಾಯಗೊಳಿಸಿದೆ. ಜೊತೆಗೆ ಖುಲ್ತಾಬಾದ್ ಪಟ್ಟಣ ಪ್ರವೇಶದ್ವಾರದಿಂದ ಸಮಾಧಿ ಇರುವ ಸ್ಥಳಕ್ಕೆ ಹೋಗುವ ಮಾರ್ಗದಲ್ಲಿ ಪೊಲೀಸರು ಹಲವಾರು ಭದ್ರತಾ ಠಾಣೆಗಳನ್ನು ಸ್ಥಾಪಿಸಿದ್ದಾರೆ. ಸದ್ಯ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರಾದರೂ, ನಗರದ ಪರಿಸ್ಥಿತಿಯು ಬೂದಿ ಮುಚ್ಚಿದ ಕೆಂಡದಂತಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ಹಿಂದೆ ಔರಂಗಜೇಬ್ ಸಮಾಧಿ ತೆರವು ಬೇಡಿಕೆಯನ್ನು ಬೆಂಬಲಿಸಿದ್ದರು. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಖುಲ್ದಾಬಾದ್ನಲ್ಲಿರುವ ಈ ಸಮಾಧಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ಹಸ್ತಾಂತರಿಸಲಾಗಿತ್ತು.
ಇನ್ನು ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಪ್ರತಿಪಕ್ಷ ಕಾಂಗ್ರೆಸ್, “ಆಡಳಿತ ಪಕ್ಷದ ನಾಯಕರೇ ದ್ವೇಷ ಹರಡಲು ಪ್ರಯತ್ನಿಸುತ್ತಿದ್ದಾರೆ. ಎರಡು ಸಮುದಾಯಗಳ ನಡುವೆ ಸಂಘರ್ಷ ಉಂಟು ಮಾಡುವುದು ಅವರ ಉದ್ದೇಶವಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದೆ.
ಘಟನೆ ಬೆನ್ನಲ್ಲೇ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿರುವ ಪೊಲೀಸರು ಈವರೆಗೂ ಪೊಲೀಸರು 15 ಜನರನ್ನು ಬಂಧನಕ್ಕೊಳಪಡಿಸಿದ್ದಾರೆ.

ಸೆಕ್ಷನ್ 163 ಜಾರಿ
ಏತನ್ಮಧ್ಯೆ ನಾಗ್ಪುರದ ಹಲವು ಪ್ರದೇಶಗಳಲ್ಲಿ ಭಾರತೀಯ ನಾಗರಿಕ ರಕ್ಷಣಾ ಸಂಹಿತೆಯ (ಸಿಆರ್ಪಿಸಿ) 163ನೇ ಕಲಂ ಅನ್ನು ಜಾರಿಗೊಳಿಸಲವಾಗಿದೆ.
ನಾಗ್ಪುರದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಈ ಆದೇಶ ಹೊರಡಿಸಲಾಗಿದೆ. ಈ ಅವಧಿಯಲ್ಲಿ ಮೆರವಣಿಗೆ ಮತ್ತು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಉಲ್ಲಂಘನೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.