ನಾಗ್ಪುರ: ಮಹಾನಗರ ಪಾಲಿಕೆ ಅಧಿಕಾರಿಗಳು ಇಂದು ಫಹೀಮ್ ಖಾನ್ ಮನೆಯ ಅಕ್ರಮ ಭಾಗವನ್ನು ಕೆಡವಿದ್ದಾರೆ. ಮಾರ್ಚ್ 17ರಂದು ನಗರದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದಲ್ಲಿ ಖಾನ್ ಪ್ರಮುಖ ಆರೋಪಿಯಾಗಿದ್ದಾನೆ. ಖಾನ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ. ಫಹೀಮ್ ಅಲ್ಪಸಂಖ್ಯಾತ ಪ್ರಜಾಸತ್ತಾತ್ಮಕ ಪಕ್ಷದ (MDP) ಪ್ರಮುಖ ನಾಯಕನಾಗಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 100ಕ್ಕೂ ಹೆಚ್ಚು ಜನರಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.

ಅಧಿಕಾರಿಗಳ ಪ್ರಕಾರ, ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ (NMC) ಕೆಲವು ದಿನಗಳ ಹಿಂದೆ ಖಾನ್ ಅವರಿಗೆ ನೋಟಿಸ್ ನೀಡಿತ್ತು. ಅದರಲ್ಲಿ ವಿವಿಧ ನ್ಯೂನತೆಗಳು ಮತ್ತು (ಅವರ ಮನೆಯ) ಕಟ್ಟಡ ಯೋಜನೆಗೆ ಅನುಮೋದನೆ ನೀಡದಿರುವುದನ್ನು ಉಲ್ಲೇಖಿಸಲಾಗಿತ್ತು. ಈ ಮನೆ ಇಲ್ಲಿನ ಯಶೋಧರ ನಗರ ಪ್ರದೇಶದ ಸಂಜಯ್ ಬಾಗ್ ಕಾಲೋನಿಯಲ್ಲಿದ್ದು, ಖಾನ್ ಅವರ ಪತ್ನಿಯ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಅವರು ಹೇಳಿದರು. ಎಂಡಿಪಿ ನಗರ ಮುಖ್ಯಸ್ಥ ಖಾನ್ ಪ್ರಸ್ತುತ ಜೈಲಿನಲ್ಲಿದ್ದಾರೆ. ಮಾರ್ಚ್ 17ರಂದು ಛತ್ರಪತಿ ಸಂಭಾಜಿನಗರದಲ್ಲಿರುವ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಧಾರ್ಮಿಕ ಶಾಸನಗಳನ್ನು ಹೊಂದಿರುವ ಹಾಳೆಯನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿ ಹರಡಿದ ನಂತರ ಹಿಂಸಾಚಾರ ಭುಗಿಲೆದ್ದಿತು.
ನಗರದ ಹಲವು ಭಾಗಗಳಲ್ಲಿ ಭಾರಿ ಕಲ್ಲು ತೂರಾಟ ನಡೆದಿದ್ದು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಘರ್ಷಣೆ ವೇಳೆ ಮೂವರು ಉಪ ಪೊಲೀಸ್ ಆಯುಕ್ತರ ಮಟ್ಟದ ಅಧಿಕಾರಿಗಳು ಸೇರಿದಂತೆ 33 ಪೊಲೀಸರು ಗಾಯಗೊಂಡಿದ್ದರು. ಹಿಂಸಾಚಾರದ ಸಮಯದಲ್ಲಿ ಹಾನಿಗೊಳಗಾದ ಆಸ್ತಿಗಳ ಬೆಲೆಯನ್ನು ಗಲಭೆಕೋರರಿಂದ ವಸೂಲಿ ಮಾಡಲಾಗುವುದು ಮತ್ತು ಪಾವತಿಸದಿದ್ದರೆ, ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗುವುದು ಮತ್ತು ನಷ್ಟವನ್ನು ಸರಿದೂಗಿಸಲು ಮಾರಾಟ ಮಾಡಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದರು. ಇನ್ನು ಗೃಹ ಖಾತೆ ಹೊಂದಿರುವ ಫಡ್ನವೀಸ್ ಪೊಲೀಸರ ಮೇಲೆ ದಾಳಿ ಮಾಡಿದವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವವರೆಗೆ ನನ್ನ ಸರ್ಕಾರ ವಿಶ್ರಮಿಸುವುದಿಲ್ಲ ಎಂದು ಹೇಳಿದ್ದರು.