ಬೆಂಗಳೂರು: ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ನಂದಿನಿ ಕಡೆಯಿಂದ ಶುದ್ಧ ದೇಸಿ ಹಸುವಿನ ತುಪ್ಪವನ್ನು (Desi Ghee) ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ದೇಸಿ ಹಸುವಿನ ತುಪ್ಪ ಮಾರ್ಕೆಟ್ (Market) ಗೆ ಲಗ್ಗೆ ಇಟ್ಟಿದ್ದು, ಬಮೂಲ್ (BAMUL) ಬೆಂಗಳೂರು ಮಾರುಕಟ್ಟೆಗೆ ದೇಸಿ ಹಸುವಿನ ತುಪ್ಪ ಪರಿಚಯಿಸಿದೆ.
ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಲಭ್ಯವಿರುವ ನಾಟಿ ಹಸುವಿನ ಹಾಲನ್ನು ಪ್ರತ್ಯೇಕವಾಗಿ ಬೆಂಗಳೂರು ಹಾಲು ಒಕ್ಕೂಟದಲ್ಲಿ ಸಂಗ್ರಹಿಸಲಾಗುತ್ತದೆ. ಬೆಂಗಳೂರು ಹಾಲು ಒಕ್ಕೂಟದಲ್ಲಿ ಈ ಹಾಲನ್ನು ಸಂಗ್ರಹಿಸಲು ಮಾಗಡಿ ಮತ್ತು ಕನಕಪುರ ತಾಲೂಕಿನ ಮರಳವಾಡಿ, ಕೋಡಿಹಳ್ಳಿ, ಮಾಡಬಾಲು ಮತ್ತು ಕಸಬಾ ಹೋಬಳಿಯ 87 ಹಾಲು ಉತ್ಪಾದಕರ ಸಂಘಟಗಳನ್ನು ಗುರುತಿಸಲಾಗಿದೆ.
ಈ ಸಂಘಗಳಲ್ಲಿ ದೇಸಿ ಹಸುಗಳಾದ ಶಾಹೀವಾಲ್, ಗಿರ್, ಅಮೃತ್ ಮಹಲ್ ಮತ್ತು ಹಳ್ಳಿಕಾರ್ ತಳಿಗಳಿಂದ ಹಾಲನ್ನು ಪ್ರಯತ್ಯೇಕವಾಗಿ ನಿಗದಿಪಡಿಸಿದರುವ ಮೂಲ ಬಲ್ಕ್ ಮಿಲ್ಕ್ ಕೂಲರ್ ಗಳಲ್ಲಿ ಸಂಗ್ರಹಿಸಿ ಪ್ರತ್ಯೇಕವಾದ ಹಾಲಿನ ಟ್ಯಾಂಕರ್ ಗಳಲ್ಲಿ ರವಾನಿಸಲಾಗುತ್ತದೆ.
ಈ ಹಾಲಿನಲ್ಲಿ 4.8ರಷ್ಟು ಜಿಡ್ಡಿನ ಅಂಶವಿರುತ್ತದೆ. ದೇಸಿ ತಳಿಯ ಪ್ರತಿ ಲೀಟರ್ ಹಾಲಿಗೆ 57.85 ರೂಪಾಯಿ ದರ ನಿಗದಿ ಮಾಡಲಾಗಿದೆ. ದೇಸಿ ಹಸುವಿನ ಹಾಲಿನಿಂದ ತುಪ್ಪ ತಯಾರಿಸಿ ನಂದಿನಿ ದೇಸಿ ಹಸುವಿನ ತುಪ್ಪ 200 ಮಿಲಿ ಮತ್ತು 500 ಮಿಲಿ ಬಾಟಲ್ ಗಳಲ್ಲಿ ಗ್ರಾಹಕರಿಗೆ ಬಿಡುಗಡೆ ಮಾಡಲಾಗುತ್ತಿದೆ. 500 ಮಿಲಿ ಬಾಟಲ್ ದರವು 900 ರೂಪಾಯಿ 200 ಮಿಲಿ ಬಾಟಲ್ ದರ 400 ರೂಪಾಯಿ ಆಗಿದೆ. ಪ್ರಾರಂಭಿಕ ಹಂತದಲ್ಲಿ ಇ-ಕಾಮರ್ಸ್ ಮತ್ತು ಆನ್ ಲೈನ್ ಮೂಲಕ ಮಾರಾಟ ಮಾಡಲಾಗುವುದು ಎಂದು ಕೆಎಂಎಫ್ ತಿಳಿಸಿದೆ.
ದೇಸಿ ಹಸುವಿನ ತುಪ್ಪದ ಅನುಕೂಲಗಳು
• ದೇಸಿ ತುಪ್ಪ ಸೇವನೆಯಿಂದ ಹೃದಯ ಮತ್ತು ಮೂಳೆಗಳ ಆರೋಗ್ಯ ವೃದ್ಧಿಸುತ್ತದೆ.
• ದೇಸಿ ತುಪ್ಪವು ಎ, ಡಿ, ಇ, ಮತ್ತು ಕೆ ವಿಟಮಿನ್ಗಳ ಸಮೃದ್ಧ ಮೂಲವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
• ದೇಸಿ ತುಪ್ಪವು ಬ್ಯುಟರಿಕ್ ಆಮ್ಲವನ್ನು ಸಹ ಹೊಂದಿದ್ದು, ಕರುಳಿನ ಆರೋಗ್ಯವನ್ನು ಸುಧಾರಿಸಲು ಮತ್ತು ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.
• ದೇಸಿ ತುಪ್ಪದಲ್ಲಿ ಒಮೆಗಾ-3 ಇರುವುದರಿಂದ ಕಣ್ಣಿ ಆರೋಗ್ಯವೃದ್ಧಿಗೆ ಅನುಕೂಲಕರವಾಗಿದೆ.
• ಚರ್ಮದ ಕಾಂತಿ ಮತ್ತು ಘೋಷಣೆಗೆ ಅನುಕೂಲಕರವಾಗಿದೆ.