ನಟ ಜಯಸೂರ್ಯ ಸೇರಿ 7 ಜನರ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಆರೋಪಗಳು ಜೋರಾಗೇ ಕೇಳಿಬರುತ್ತಿವೆ. ಇದೀಗ ಪ್ರಮುಖ ನಟರ ವಿರುದ್ಧ ಕಿರುಕುಳದ ಆರೋಪ ಮಾಡಿರುವ ನಟಿಮಣಿಯರ ಹೇಳಿಕೆಗಳನ್ನು ತೆಗೆದುಕೊಳ್ಳಲಾಗಿದೆ. ವಿಶೇಷ ತನಿಖಾ ತಂಡದ ಜಿ.ಪೂಂಗುಡಲಿ ಮತ್ತು ಅಜೀತಾ ಬೇಗಂ (Poonkuzhali, Ajeetha Begum) ಅವರು ನಟಿಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ತನಿಖಾ ತಂಡ ಆಲುವಾದಲ್ಲಿರುವ ಫ್ಲ್ಯಾಟ್​​ ಒಂದಕ್ಕೆ ಆಗಮಿಸಿ ಕೆಲ ನಟಿಯರಿಂದ ಹೇಳಿಕೆಗಳನ್ನು ಪಡೆದುಕೊಂಡಿದೆ.

ಮಲಯಾಳಂ ಚಿತ್ರರಂಗದ ಪ್ರಮುಖ ನಟರು ಮತ್ತು ತಂಡದ ಸದಸ್ಯರ ವಿರುದ್ಧ ನಟಿಯರು ಗಂಭೀರ ಆರೋಪ ಮಾಡಿದ್ದಾರೆ. ನಟರಾದ ಮುಖೇಶ್, ಜಯಸೂರ್ಯ, ಮಣಿಯನ್​​​ಪಿಳ್ಳ ರಾಜು, ಇಡವೆಲ್​​ ಬಾಬು, ಚಂದ್ರಶೇಖರನ್, ಪ್ರೊಡಕ್ಷನ್​​ ಟೀಮ್​ನ ನೋಬಲ್ ಮತ್ತು ವಿಚು ವಿರುದ್ಧ ಆರೋಪಗಳು ಕೇಳಿಬಂದಿವೆ.

ಸಾಮಾಜಿಕ ಜಾಲತಾಣಗಳ ಮೂಲಕ ಆರೋಪಗಳ ಸುರಿಮಳೆಗೈದಿದ್ದ ನಟಿಯೋರ್ವರು ವಿಶೇಷ ತನಿಖಾ ತಂಡಕ್ಕೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. 2013ರಲ್ಲಿ ಕೆಟ್ಟ ಅನುಭವ ಎದುರಿಸಬೇಕಾಯಿತು. ಅವರ ಬೇಡಿಕೆಗಳನ್ನು ಈಡೇರಿಸಲು ನಾನು ಸಿದ್ಧಳಾಗದ ಕಾರಣ ಚಿತ್ರರಂಗವನ್ನು ತೊರೆಯಬೇಕಾಯಿತು ಎಂದು ದೂರಿದ್ದಾರೆ. 2013ರಲ್ಲಿ ಕೆಲಸ ಮಾಡುವಾಗ, ಈ ವ್ಯಕ್ತಿಗಳಿಂದ ದೈಹಿಕ ಮತ್ತು ಮಾತಿನ ನಿಂದನೆಗೊಳಗಾಗಿದ್ದೆ. ಕಿರುಕುಳ ಅಸಹನೀಯವೆನಿಸಿದಾಗ ಮಲಯಾಳಂ ಚಿತ್ರರಂಗ ತೊರೆಯಬೇಕಾಯಿತು ಎಂದು ನಟಿ ಆರೋಪಿಸಿದ್ದಾರೆ.

ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಹೊರಬಿದ್ದ ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಹಲವು ನಟಿಯರು ನಟರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಆರೋಪ, ಆಕ್ರೋಶ, ಅಸಮಾಧಾನ ಮುಂದುವರಿದಿದೆ. ಈ ಬಗ್ಗೆ ದೊಡ್ಡ ಮಟ್ಟಿನ ಚರ್ಚೆ ನಡೆಯುತ್ತಿದೆ. ಈ ವಿಚಾರವಾಗಿ ಎರಡು ದಿನಗಳ ಕಾಲ ‘ಅಮ್ಮ’ ಸಂಘ ಮೌನ ವಹಿಸಿತ್ತು. ನಂತರ ಅಮ್ಮ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿದ್ದಿಕ್ ಮಾಧ್ಯಮಗೋಷ್ಟಿ ನಡೆಸಿ ತಮ್ಮ ನಿಲುವು ಪ್ರಕಟಿಸಿದ್ದರು.

Leave a Reply

Your email address will not be published. Required fields are marked *