ಬಿಹಾರ: ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಮತ್ತು ಕಿಂಗ್ಪಿನ್ ಸಂಜೀವ್ ಕುಮಾರ್ ಅಲಿಯಾಸ್ ಸಂಜೀವ್ ಮುಖಿಯಾಗಾಗಿ ಬಿಹಾರ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಸಂಜೀವ್ ಮುಖಿಯಾ ಮೂಲತಃ ನಳಂದದ ನಾಗರನೌಸಾ ನಿವಾಸಿ ಆಗಿದ್ದು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಎಂದು ಪೊಲೀಸರು ಶಂಕಿಸಿದ್ದಾರೆ. ಈತ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ. ಸಂಜೀವ್ ಕಳೆದ ಎರಡು ದಶಕಗಳಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಸೋರಿಕೆ ದಂಧೆಯಲ್ಲಿ ತೊಡಗಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಬಿಹಾರದಲ್ಲಿ ಮುಕ್ತಾಯಗೊಂಡ ಶಿಕ್ಷಕರ ಮರು ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಸೋರಿಕೆ ಪ್ರಕರಣದಲ್ಲೂ ಸಂಜೀವ್ ಮುಖಿಯಾ ಅವರ ಪುತ್ರ ಡಾ.ಶಿವಕುಮಾರ್ ಕೂಡ ಭಾಗಿಯಾಗಿ ಸದ್ಯ ಬಂಧನದಲ್ಲಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ನಂತದ ಆರ್ಥಿಕ ಅಪರಾಧಗಳ ಘಟಕ (ಇಒಯು) 279 ಆರೋಪಿಗಳನ್ನು ಬಂಧಿಸಿ 68 ದಿನಗಳ ಕಾಲ ತೀವ್ರ ತನಿಖೆ ನಡೆಸಿ ಬಳಿಕ ಆರೋಪಿ ಶಿವಕುಮಾರ್ನನ್ನು ಜೈಲಿಗೆ ಕಳುಹಿಸಿದ್ದರು.
2010 ರಿಂದ ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಯಲ್ಲಿ ತೊಡಗಿರುವ ಸಂಜೀವ್ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಈತ ತನ್ನದೇ ಆದ ಗ್ಯಾಂಗ್ ಅನ್ನು ಮಾಡಿಕೊಂಡು ದಂಧೆ ನಡೆಸುತ್ತಿರುವುದಾಗಿ ಬಿಹಾರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇತ್ತೀಚೆಗಷ್ಟೇ ಸಂಜೀವ್ ಮುಖಿಯಾ ಮತ್ತವನ ಗ್ಯಾಂಗ್ನಿಂದ ಬಿಪಿಎಸ್‌ಸಿ (ಬಿಹಾರ ಲೋಕಸೇವಾ ಆಯೋಗ) ಪರೀಕ್ಷೆಯ ಪತ್ರಿಕೆಯೂ ಸೋರಿಕೆ ಮಾಡಲಾಗಿತ್ತು ಎಂಬ ಆರೋಪ ಇದೆ