ನವದೆಹಲಿ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ(NEET-UG paper leak case) ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಶನಿವಾರ ಸಾಲ್ವರ್ ಆಗಿ ಕಾರ್ಯನಿರ್ವಹಿಸಿದ ಕಿಂಗ್ ಪಿನ್ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಿದೆ. ಇಂದು ಎನ್‌ಐಟಿ-ಜೆಮ್‌ಶೆಡ್‌ಪುರದ ಬಿಟೆಕ್ ಪದವೀಧರ ಹಾಗೂ ಮತ್ತಿಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಬಂಧಿಸುವ ಮೂಲಕ ಇದುವರೆಗೆ ಒಟ್ಟು 21 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಪಾದಿತ ಅಕ್ರಮಗಳಿಗೆ ಸಂಬಂಧಿಸಿದ ಆರು ಪ್ರಕರಣಗಳಲ್ಲಿ ಸಂಸ್ಥೆಯು ಇದುವರೆಗೆ 21 ಮಂದಿಯನ್ನು ಬಂಧಿಸಿದೆ. ಇಂದು ಬಂಧನಕ್ಕೀಡಾಗಿರುವ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ರಾಜಸ್ಥಾನದ ಭರತ್‌ಪುರದ ವೈದ್ಯಕೀಯ ಕಾಲೇಜಿನವರಾಗಿದ್ದಾರೆ. ಇಬ್ಬರು ಸಾಲ್ವರ್ ಗಳನ್ನು ಭರತ್‌ಪುರ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರ್ ಮಂಗಳಂ ಬಿಷ್ಣೋಯ್ ಮತ್ತು ದೀಪೇಂದರ್ ಕುಮಾರ್ ಎಂದು ಗುರುತಿಸಲಾಗಿದೆ.
ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಕುಮಾರ್ ಮಂಗಳಂ ಬಿಷ್ಣೋಯ್ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿ ದೀಪೇಂದರ್ ಶರ್ಮಾ ನೀಟ್ ಯುಜಿ ಪರೀಕ್ಷೆ ನಡೆದ ದಿನವಾದ ಮೇ 5 ರಂದು ಹಜಾರಿಬಾಗ್‌ನಲ್ಲಿ ಕಾಣಿಸಿಕೊಂಡಿದ್ದರು. ಇವರಿಬ್ಬರು ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಮೊದಲು ಬಂಧನಕ್ಕೊಳಗಾದ ಪಂಕಜ್ ಕುಮಾರ್ ಕದ್ದು ತಂದ ನೀಟ್ ಪ್ರಶ್ನೆ ಪತ್ರಿಕೆಗೆ ಉತ್ತರ ನೀಡಿ ಬಗೆಹರಿಸುವವರಾಗಿದ್ದರು.
ಶಶಿಕಾಂತ್ ಪಾಸ್ವಾನ್ ಅಲಿಯಾಸ್ ಶಶಿ ಅಲಿಯಾಸ್ ಪಸು, ಜೆಮ್‌ಶೆಡ್‌ಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಿ.ಟೆಕ್ (ಎಲೆಕ್ಟ್ರಿಕಲ್) ನಲ್ಲಿ ತೇರ್ಗಡೆ ಹೊಂದಿದ್ದು, ಈ ಹಿಂದೆ ಬಂಧಿತಕ್ಕೊಳಗಾಗಿದ್ದ ಕುಮಾರ್ ಮತ್ತು ರಾಕಿ ಜೊತೆ ವ್ಯವಹರಿಸುತ್ತಿದ್ದನು ಎಂದು ತಿಳಿದುಬಂದಿದೆ