ನವದೆಹಲಿ: ರೇಣುಕಿಸ್ವಾಮಿ ಮೃತದೇಹಿ ಸಿಕ್ಕ ಎರಡು ದಿನಗಳಲ್ಲಿ ನಟ ದರ್ಶನ್ ಅವರನ್ನು ಬಂಧಿಸಲು ಸಿಕ್ಕ ಸಾಕ್ಷ್ಯಗಳೇನು’ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠವು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಆರ್.ಮಹದೇವನ್ ಅವರ ಪೀಠವು ಮಂಗಳವಾರ ನಡೆಸಿತು. ಪಂಚನಾಮೆ ಮಾಡಿದ್ದು ಯಾವಾಗ, ಐವರು ಸಾಕ್ಷಿಗಳು ಯಾರು ಎಂಬುದರ ಮಾಹಿತಿ ನೀಡಬೇಕು’ ಎಂದು ನ್ಯಾಯಪೀಠವು ರಾಜ್ಯ ಸರ್ಕಾರದ ವಕೀಲರಿಗೆ ಸೂಚಿಸಿತು.
ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಸಿದ್ದಾರ್ಥ ಲೂತ್ರಾ ಹಾಗೂ ದರ್ಶನ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನುಸಿಂಫ್ಟಿ ವಾದಿಸಿದರು. ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿತು.
‘ಎಲ್ಲ ಆರೋಪಿಗಳಿಗೆ ಜಾಮೀನು ಸಿಕ್ಕಿದೆಯಾ’ ಎಂದು ನ್ಯಾಯಪೀಠ ಪ್ರಶ್ನಿಸಿತು. ಆಗ ಲೂತ್ರಾ, ‘ಎಲ್ಲರಿಗೂ ಜಾಮೀನು ಸಿಕ್ಕಿದೆ. ಏಳು ಆರೋಪಿಗಳ ಜಾಮೀನು ರದ್ದುಪಡಿಸುವಂತೆ ಅರ್ಜಿ ಸಲ್ಲಿಸಲಾಗಿದೆ’ ಎಂದರು. ‘ಕೊಲೆಗೆ ಕಾರಣ ಏನು’ ಎಂದು ನ್ಯಾಯಮೂರ್ತಿ ಪಾರ್ದೀವಾಲಾ ಪ್ರಶ್ನಿಸಿದರು.
‘ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದು ಕೊಲೆಗೆ ಕಾರಣ’ ಎಂದು ಲೂತ್ರಾ ಅವರು ಪ್ರಕರಣದ ಬಗ್ಗೆ ವಿವರಿಸಿದರು. ಜಾಮೀನು ನೀಡಿರುವ ಹೈಕೋರ್ಟ್ ಆದೇಶವನ್ನೂ ಅವರು ಉಲ್ಲೇಖಿಸಿದರು. ಪ್ರಕರಣದ ವಿಚಾರಣೆ ಯಾವ ಹಂತದಲ್ಲಿದೆ ಎಂದು ನ್ಯಾಯಮೂರ್ತಿ ಕೇಳಿದರು. ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಶಸ್ತ್ರಚಿಕಿತ್ಸೆ ನೆಪದಲ್ಲಿ ಆರೋಪಿ ಜಾಮೀನು ಪಡೆದಿದ್ದಾರೆ, ಆದರೆ, ದರ್ಶನ್ ಸಾರ್ವಜನಿಕವಾಗಿ ಸಾಕ್ಷಿಗಳ ಜತೆಗೆ ಓಡಾಡುತ್ತಿದ್ದಾರೆ. ಇದರಿಂದಾಗಿ, ಪ್ರಕರಣದ ವಿಚಾರಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ’ ಎಂದು ಲೂತ್ರಾ ಅವರು ಪೀಠದ ಗಮನಕ್ಕೆ ತಂದರು. ದರ್ಶನ್ ರಾಜಕಾರಣಿಯೇ ಎಂದು ಪೀಠ ಕೇಳಿತು. ಅದಕ್ಕೆ ಪ್ರತಿಕ್ರಿಯಿಸಿದ ಲೂತ್ರಾ, ‘ಕನ್ನಡದ ಪ್ರಸಿದ್ಧ ಚಿತ್ರನಟ’ ಎಂದರು.
‘ರೇಣುಕಸ್ವಾಮಿ ಮೃತದೇಹ ನೋಡಿದ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದರು’ ಎಂದು ಅವರು ಹೇಳಿದರು. ’11 ದಿನಗಳ ನಂತರ ಆ ವ್ಯಕ್ತಿಯ ಹೇಳಿಕೆ ದಾಖಲಿಸಲಾಗಿದೆ’ ಎಂದು ದರ್ಶನ್ ಪರ ವಕೀಲರು ವಾದಿಸಿದರು. ‘ಅಲ್ಲಿಯವರೆಗೆ ಪೊಲೀಸರು ಏನು ಮಾಡುತ್ತಿದ್ದರು. ಏಳು ಆರೋಪಿಗಳ ಹೆಸರನ್ನು ಆ ವ್ಯಕ್ತಿ ಹೇಳಿದ್ದಾರಾ’ ಎಂದು ನ್ಯಾಯಪೀಠ ಕೇಳಿತು. ‘ರೇಣುಕಸ್ವಾಮಿಯನ್ನು ಶೆಡ್‌ನಲ್ಲಿ ಕೊಲೆ ಮಾಡಲಾಗಿದೆ’ ಎಂದು ಲೂತ್ರಾ ಹೇಳಿದರು. ‘ಮೃತದೇಹವನ್ನು ಆರೋಪಿಗಳು ಎಸೆದು ಹೋಗಿದ್ದರಾ’ ಎಂದು ನ್ಯಾಯಮೂರ್ತಿ ಕೇಳಿದರು. ಹೌದು ಎಂದು ಸರ್ಕಾರಿ ವಕೀಲರು ಪ್ರತಿಕ್ರಿಯಿಸಿದರು. ‘ಸಿಸಿಟಿವಿ ಕ್ಯಾಮೆರಾದಲ್ಲಿ ಪ್ರಕರಣದ ದೃಶ್ಯಗಳು ಸೆರೆಯಾಗಿವೆ. ಘಟನೆಗೆ ಸಂಬಂಧಿಸಿದ ಫೋಟೋಗಳಿವೆ. ರೇಣುಕಸ್ವಾಮಿಗೆ ವಿದ್ಯುತ್ ಶಾಕ್ ನೀಡಲಾಗಿದೆ. ಹಲ್ಲೆಯಿಂದಾಗಿ ದೇಹದ ಪ್ರಮುಖ ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿದೆ’ ಎಂದು ಲೂತ್ರಾ ವಾದಿಸಿದರು.
ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನುಸಿಂಘಿ, ‘ನನ್ನ ಕಕ್ಷಿದಾರರು ಕೊಲೆ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಹಾಗೂ ಯಾವುದೇ ದಾಖಲೆ ಇಲ್ಲ’ ಎಂದರು. ಆಗ ಲೂತ್ರಾ ಅವರು ಪೂರಕ ಸಾಕ್ಷ್ಯಗಳ ಬಗ್ಗೆ ವಿವರ ನೀಡಿದರು. ‘ಮೂರು ಸೆಕೆಂಡ್‌ಗಳ ವಿಡಿಯೊ ತೋರಿಸಲಾಗುತ್ತಿದೆ. ಆದರೆ, ಆ ವಿಡಿಯೊದಲ್ಲಿ ದರ್ಶನ್ ಇಲ್ಲ’ ಎಂದು ಸಿಂಪ್ಲಿ ಸ್ಪಷ್ಟಪಡಿಸಿದರು. ಅದರಲ್ಲಿ ಹಲ್ಲೆ ಮಾಡುತ್ತಿರುವ ದೃಶ್ಯ ಇದೆಯಲ್ಲ. ಆ ವಿಡಿಯೊ ಮಾಡಿದವರು ಯಾರು’ ಎಂದು ನ್ಯಾಯಪೀಠ ಪ್ರಶ್ನಿಸಿತು. ದರ್ಶನ್ ಅವರಿಗೆ ಮದುವೆಯಾಗಿದೆಯಾ ಎಂದೂ ನ್ಯಾಯಮೂರ್ತಿ ಕೇಳಿದರು. ಹೌದು ಎಂದು ವಕೀಲರು ಉತ್ತರಿಸಿದರು. ‘ಸಂದೇಶ ಕಳುಹಿಸಿದ್ದು ದರ್ಶನ್ ಪತ್ನಿಗಾ’ ಎಂದೂ ನ್ಯಾಯಮೂರ್ತಿ ಪ್ರಶ್ನಿಸಿದರು. ‘ಅಲ್ಲ, ಅವರ ಮಿಸ್ಟೆಸ್‌ಗೆ’ ಎಂದು ಸಿಂಫ್ಟಿ ಪ್ರತಿಕ್ರಿಯಿಸಿದರು.
‘ಮೃತದೇಹ ಪತ್ತೆಯಾದ ಒಂಬತ್ತು ದಿನಗಳ ಬಳಿಕ ಪ್ರಕರಣದ ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ. ಇದು ಅನುಮಾನಕ್ಕೆ ಕಾರಣವಾಗಿದೆ. ಜತೆಗೆ, ಪ್ರಕರಣ ನಡೆದ ಜಾಗದ ಮಾಲೀಕ ದರ್ಶನ್ ಅಲ್ಲ. ಅದಕ್ಕೂ ದರ್ಶನ್ ಗೂ ಸಂಬಂಧ ಇಲ್ಲ. ಕಾನೂನುಬಾಹಿರವಾಗಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಸಿಂಫ್ಟಿ ವಾದಿಸಿದರು.
ದರ್ಶನ್, ಪವಿತ್ರಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್ ಹಾಗೂ ಜಗದೀಶ್ ಅವರಿಗೆ ಹೈಕೋರ್ಟ್ ನಿಯಮಿತ ಜಾಮೀನು ಮಂಜೂರು ಮಾಡಿತ್ತು. ಉಳಿದ ಹತ್ತು ಮಂದಿ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಈ ನಿಯಮಿತ ಜಾಮೀನು ಆದೇಶ ಪ್ರಶ್ನಿಸಿ ವಕೀಲ ಅನಿಲ್ ನಿಶಾನಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ಜನವರಿ 24ರಂದು ನಿರಾಕರಿಸಿತ್ತು. ಆದರೆ, ರಾಜ್ಯದ ಅರ್ಜಿ ವಿಚಾರಣೆಗೆ ಒಪ್ಪಿಗೆ ಕೊಟ್ಟಿತ್ತು. ದರ್ಶನ್ ಹಾಗೂ ಇತರ ಆರೋಪಿಗಳಿಗೆ ನೋಟಿಸ್ ನೀಡಿತ್ತು.