ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ನಡೆದ ಭಾರತೀಯ ಸೇನಾ ಕಾರ್ಯಾಚರಣೆಯಲ್ಲಿ ಉಗ್ರರ ನೆಲೆಗಳನ್ನು ಮಾತ್ರ ಧ್ವಂಸ ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ದಾಳಿ ನಡೆಸಿದಲ್ಲಿ, ಭೀಕರ ಮರು ದಾಳಿ ನಡೆಸುವುದಾಗಿ ಭಾರತ ವಿಶ್ವದ ರಾಷ್ಟ್ರಗಳಿಗೆ ತಿಳಿಸಿದೆ.

ಭಾರತವು ಉದ್ವಿಗ್ನತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿಲ್ಲ. ಆದರೆ, ಪಾಕಿಸ್ತಾನ ನಮ್ಮ ಮೇಲೆ ದಾಳಿ ಮಾಡಿದಲ್ಲಿ, ಅದಕ್ಕೆ ದುಪ್ಪಟ್ಟು ಪ್ರತೀಕಾರ ಮಾಡಬೇಕಾಗುತ್ತದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ವಿವಿಧ ದೇಶಗಳ ಮುಖ್ಯಸ್ಥರಿಗೆ ತಿಳಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ (ಪಿಒಕೆ) ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿದ ಕ್ಷಿಪಣಿ ದಾಳಿಯ ಬಗ್ಗೆ ದೋವಲ್ ಅಮೆರಿಕ, ಇಂಗ್ಲೆಂಡ್, ಸೌದಿ ಅರೇಬಿಯಾ ಮತ್ತು ಜಪಾನ್ಗೆ ದಾಳಿಯ ಬಗ್ಗೆ ವಿವರಿಸಿದ್ದಾರೆ. ರಷ್ಯಾ ಮತ್ತು ಫ್ರಾನ್ಸ್ನ ರಕ್ಷಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಜಿತ್ ದೋವಲ್ ಅವರು ಅಮೆರಿಕದ ಎನ್ಎಸ್ಎ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಇಂಗ್ಲೆಂಡ್ನ ಜೊನಾಥನ್ ಪೊವೆಲ್, ಸೌದಿ ಅರೇಬಿಯಾದ ಮುಸೈದ್ ಅಲ್ ಐಬಾನ್, ಯುಎಇಯ ಶೇಖ್ ತಹ್ನೂನ್ ಮತ್ತು ಜಪಾನ್ನ ಮಸಟಕ ಒಕಾನೊ, ರಷ್ಯಾದ ಎನ್ಎಸ್ಎ ಮುಖ್ಯಸ್ಥ ಸೆರ್ಗೆಯ್ ಶೋಯಿಗು, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಬೊನ್ನೆ ಅವರೊಂದಿಗೆ ಮಾತನಾಡಿ ಮಾಹಿತಿ ನೀಡಿದ್ದಾರೆ.