ನವದೆಹಲಿ || Pahalgam ನರಮೇಧದ ವಿರುದ್ಧ ಪ್ರತೀಕಾರಕ್ಕೆ ಸಜ್ಜಾದ ಭಾರತ

ಲಂಡನ್ || PM Modiಗೆ ಭರ್ಜರಿ ಸ್ವಾಗತ, ಕೈಯಲ್ಲಿ ಭಾರತದ ಬಾವುಟ, ಎಲ್ಲೆಲ್ಲೂ ಮೊಳಗಿದ ಜೈಕಾರ.

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ 26 ಮಂದಿ ಅಮಾಯಕ ಪ್ರವಾಸಿಗರನ್ನು ಗುಂಡಿಟ್ಟು ಕೊಂದು ಹಾಕಿದ ಪಾಕಿಸ್ತಾನ ಪ್ರಾಯೋಜಿತ ಉಗ್ರರ ಅಮಾನವೀಯ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಲು ಭಾರತ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ.  ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ಮೋದಿ, ಭಾರತದ ಪ್ರತಿಕ್ರಿಯೆಯ ವಿಧಾನ, ಗುರಿಗಳು ಮತ್ತು ಸೂಕ್ತ ಸಮಯವನ್ನು ನಿರ್ಧರಿಸಲು ಸೇನಾ ಪಡೆಗಳಿಗೆ ಸಂಪೂರ್ಣ ಕಾರ್ಯಾಚರಣೆಯ ಸ್ವಾತಂತ್ರ್ಯ ನೀಡಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ಮತ್ತು ಮೂರು ಸೇನಾಪಡೆಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು. ಭಯೋತ್ಪಾದನೆಗೆ ಬಲವಾದ ಹೊಡೆತ ನೀಡುವುದು ರಾಷ್ಟ್ರೀಯ ಸಂಕಲ್ಪ ಎಂದು ಮೋದಿ ಹೇಳಿರುವುದಾಗಿ ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಇದೇ ವೇಳೆ, ಸಶಸ್ತ್ರ ಪಡೆಗಳ ವೃತ್ತಿಪರ ಸಾಮರ್ಥ್ಯಗಳಲ್ಲಿ ತಮಗೆ ಸಂಪೂರ್ಣ ನಂಬಿಕೆ ಮತ್ತು ವಿಶ್ವಾಸವಿರುವುದಾಗಿ ಪ್ರಧಾನಿ ತಿಳಿಸಿದ್ದಾರೆ.

“ನಮ್ಮ ಪ್ರತಿಕ್ರಿಯೆಯ ವಿಧಾನಗಳು, ಗುರಿಗಳು ಮತ್ತು ಸಮಯವನ್ನು ನಿರ್ಧರಿಸಲು ಅವರಿಗೆ ಸಂಪೂರ್ಣ ಕಾರ್ಯಾಚರಣೆಯ ಸ್ವಾತಂತ್ರ್ಯವಿದೆ” ಎಂದು ಮೋದಿ ಹೇಳಿರುವುದಾಗಿ ವಿಶ್ವಸನೀಯ ಮೂಲಗಳು ಹೇಳಿವೆ.

ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ ಉಗ್ರರು ಮತ್ತು ಅವರನ್ನು ಪೋಷಿಸುವರನ್ನು ಮಟ್ಟ ಹಾಕುವ ಪ್ರತಿಜ್ಞೆಯನ್ನು ಮೋದಿ ಈಗಾಗಲೇ ಮಾಡಿದ್ದಾರೆ. ಭಾರತದಲ್ಲಿ ಸಾಕಷ್ಟು ಭಯೋತ್ಪಾದಕ ದಾಳಿ ನಡೆಸಿ ರಕ್ತಪಾತ ಹರಿಸಿರುವ ಇತಿಹಾಸ ಹೊಂದಿರುವ ಪಾಕಿಸ್ತಾನಕ್ಕೆ ಅದರ ಕಲ್ಪನೆಗೂ ಮೀರಿದ ಕಠಿಣ ಶಿಕ್ಷೆ ವಿಧಿಸುವುದಾಗಿ ಪ್ರಧಾನಿ ಮೋದಿ ಈಗಾಗಲೇ ಘೋಷಿಸಿದ್ದಾರೆ.

ಏಪ್ರಿಲ್ 22ರಂದು ಕಾಶ್ಮೀರದ ಜನಪ್ರಿಯ ತಾಣ ಪಹಲ್ಗಾಮ್ನಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ 26 ಪ್ರವಾಸಿಗರನ್ನು ಭಯೋತ್ಪಾದಕರು ಅತ್ಯಂತ ಸಮೀಪದಿಂದಲೇ ಧರ್ಮದ ಆಧಾರದಲ್ಲಿ ಗುಂಡಿಟ್ಟು ಕೊಂದಿದ್ದರು. ಕ್ರೂರ ದಾಳಿಗೆ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಪಾಕಿಸ್ತಾನದ ವಿರುದ್ಧ ಪಕ್ಷಾತೀತ ಒಗ್ಗಟ್ಟು ಮೂಡಿದೆ. ಅದೇ ರೀತಿ ಪಾಕಿಸ್ತಾನದ ವಿರುದ್ಧ ಪ್ರತೀಕಾರದ ಕ್ರಮಗಳಿಗೆ ಜನರು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ನೆರೆ ರಾಷ್ಟ್ರದೊಂದಿಗೆ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸುವುದೂ ಸೇರಿದಂತೆ ಭಾರತ ಸರಣಿ ಕಠಿಣ ಕ್ರಮಗಳನ್ನು ಕೈಗೊಂಡಿದೆ.

Leave a Reply

Your email address will not be published. Required fields are marked *