ನವದೆಹಲಿ: ಭಾರತಹಾಗೂ ಬ್ರಿಟನ್ನಡುವಿನ ಬಹು ನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದ ಕೊನೆಗೂ ಅಂತಿಮಗೊಂಡಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬ್ರಿಟನ್ಗೆ ಭೇಟಿ ನೀಡಲಿದ್ದು, ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಲಿದ್ದಾರೆ. ಹಾಗಾದರೆ ಈ ಮುಕ್ತ ವ್ಯಾಪಾರ ಒಪ್ಪಂದವೇನೆಂದು ನೋಡುವುದಾದರೆ ಯಾವುದೋ ಒಂದು ದೇಶ ಮತ್ತೂಂದು ದೇಶದ ಜೊತೆಗೆ ಸುಂಕ ರಹಿತವಾಗಿ ಮಾಡಿಕೊಳ್ಳುವ ಒಪ್ಪಂದವನ್ನು ಮುಕ್ತ ವ್ಯಾಪಾರ ಒಪ್ಪಂದ ಎನ್ನಲಾಗುತ್ತದೆ. ಈ ವೇಳೆ ಉಭಯ ದೇಶಗಳ ನಡುವೆ ವಿನಿಮಯವಾಗುವ ಸರಕುಗಳಿಗೆ ಆಮದು ಸುಂಕ ವಿಧಿಸಲಾಗುವುದಿಲ್ಲ.

ಭಾರತ ಮತ್ತು ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ)ಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ, ಇದು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಲಂಡನ್ನಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರ ಪ್ರಕಾರ, ಒಪ್ಪಂದವು ಅಂತಿಮ ಕಾನೂನು ಹಂತದಲ್ಲಿದೆ, ಮೇ 6 ರಂದು ಭಾರತ-ಬ್ರಿಟಿಷ್ ಅಧಿಕಾರಿಗಳ ನಡುವೆ ನಡೆದ ಮಾತುಕತೆಯ ಆಧಾರದ ಮೇಲೆ ಅದು ಜಾರಿಗೆ ಬಂದಿದೆ ಎಂದಿದ್ದಾರೆ.
ಮುಕ್ತ ವ್ಯಾಪಾರ ಒಪ್ಪಂದದ ಮೂಲಕ, ಭಾರತ- ಯುಕೆ 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 120 ಶತಕೋಟಿ ಅಮೆರಿಕನ್ ಡಾಲರ್ಗಳಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿವೆ.
ಈ ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣಿಸಿದ ಪ್ರಧಾನಿ ಮೋದಿ ಹಾಗೂ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಆರ್ಥಿಕತೆ, ಹೂಡಿಕೆ, ನಾವೀನ್ಯತೆ ಮತ್ತು ಉದ್ಯೋಗ ಸೃಷ್ಟಿಗೆ ಇದು ನೆರವು ನೀಡುತ್ತದೆ ಎಂದು ಹೇಳಿದ್ದಾರೆ. ಇದರೊಂದಿಗೆ ಡಬಲ್ ಕಾಂಟ್ರಿಬ್ಯೂಷನ್ ಒಪ್ಪಂದವನ್ನು ಮಾಡಿಕೊಂಡಿದ್ದು, ಒಂದು ದೇಶದ ನಾಗರಿಕರು ಮತ್ತೂಂದು ದೇಶದಲ್ಲಿ ಕೆಲಸ ಮಾಡುವಾಗ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಒಂದನ್ನು ಮಾತ್ರ ಆಯ್ದುಕೊಳ್ಳಲು ಅವಕಾಶ ಒದಗಿಸುತ್ತದೆ.