ನವದೆಹಲಿ : ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಗೃಹ ಸಚಿವ ಅಮಿತ್ ಶಾ ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಒಬ್ಬನೇ ಒಬ್ಬ ಭಯೋತ್ಪಾದಕನನ್ನೂ ಬಿಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನಿ ಸೇನೆಯ ಆತಂಕ ಹೆಚ್ಚಾಗಿದೆ ಎನ್ನಲಾಗಿದೆ.

2019 ರಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಪುಲ್ವಾಮಾದಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆಸಿ ಸುಮಾರು ೪೦ ಮಂದಿ ಸೇನಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು. ನಂತರ ಭಾರತವು ಪಿಒಕೆ ಪ್ರದೇಶದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಸುಮಾರು ೩೦೦ ಭಯೋತ್ಪಾದಕರನ್ನು ಹತ್ಯೆ ಮಾಡಿತ್ತು. ಈ ಹಿಂದೆ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಉಗ್ರ ದಾಳಿಯ ನಂತರ ಕಠಿಣ ಕ್ರಮ ಕೈಗೊಂಡಿದ್ದ ಭಾರತೀಯ ಸೇನೆ ಗಡಿಯಾಚೆಗಿನ, ಪಾಕಿಸ್ತಾನದ ಹಿಡಿತದಲ್ಲಿರುವ ಉಗ್ರರ ಅಡಗುದಾಣಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಇದೀಗ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ ೨೬ ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಭಾರತೀಯ ಸೇನೆ ಮತ್ತೆ ಅಲರ್ಟ್ ಆಗಿದೆ. ಇದು ಪಾಕಿಸ್ತಾನ ಸೇನೆಯನ್ನು ಚಿಂತೆಗೀಡು ಮಾಡಿದೆಯಂತೆ. ಪಾಕಿಸ್ತಾನದ ವಾಯುನೆಲೆಗಳಲ್ಲಿ ಭದ್ರತೆ ಹೆಚ್ಚಿಸಲಾಗುತ್ತಿದ್ದು, ಉಗ್ರರನ್ನು ಈಗಿರುವ ಅಡಗುದಾಣಗಳಿಂದ ಬೇರೆಡೆಗೆ ಸ್ಥಳಾಂತರಿಸಲು ಅಲ್ಲಿನ ಸೇನೆ ಮುಂದಾಗಿರುವುದು ಉಪಗ್ರಹ ಚಿತ್ರಗಳಿಂದ ತಿಳಿದುಬಂದಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನ ಹಿರಿಯ ಸೇನಾ ಅಧಿಕಾರಿಗಳು ಮಂಗಳವಾರ ರಾತ್ರಿ ವಾಯುನೆಲೆಯ ಮೇಲ್ವಿಚಾರಣೆಯಲ್ಲಿ ನಿರತರಾಗಿದ್ದರು. ಗಡಿಯಾಚೆಗಿನ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಭಾರತ ಯಾವುದೇ ಸಮಯದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಬಹುದು ಎಂದು ಪಾಕಿಸ್ತಾನ ಭಯಪಡುತ್ತಿದೆ ಎಂದು ಮೂಲಗಳು ತಿಳಿಸಿವೆ.




