ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಖಾಡ ಸಿದ್ಧಪಡಿಸಿಕೊಳ್ಳುತ್ತಿರುವ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್, ಅಮರಣಾಂತ ಉಪವಾಸ ಕೈಗೊಳ್ಳಲು ಮುಂದಾಗಿದ್ದಾರೆ. ಬಿಹಾರ ಲೋಕಸೇವಾ ಆಯೋಗ (ಬಿಪಿಎಸ್ಸಿ)ದಿಂದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಅವರಿಗೆ ನ್ಯಾಯ ದೊರಕಿಸುವ ಸಲುವಾಗಿ ನಮ್ಮ ಹೋರಾಟ ಸಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಡಿ.13ರಂದು ನಡೆದ 70ನೇ ಬಿಪಿಎಸ್ಸಿ ಪ್ರಿಲಿಮಿನರಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಅಭ್ಯರ್ಥಿಗಳ ಹೋರಾಟ ಮುಂದುವರೆದ ಬೆನ್ನಲ್ಲೇ ಪ್ರಶಾಂತ್ ಕಿಶೋರ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಬಿಹಾರ ಸರ್ಕಾರಕ್ಕೆ 48 ಗಂಟೆಗಳ ಗಡುವು ನೀಡಿರುವ ಅವರು, ಪ್ರತಿಭಟನಾನಿರತ ವಿದ್ಯಾರ್ಥಿಗಳ ಬೇಡಿಕೆಯಂತೆ, ಈಗಾಗಲೇ ನಡೆದ ಪರೀಕ್ಷೆ ರದ್ದು ಮಾಡಿ, ಹೊಸ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡುತ್ತಾ ಪ್ರಶಾಂತ್ ಕಿಶೋರ್, ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಅವರಿಗೆ ಬಲ ತುಂಬಲು ನಾವು ಅವರ ಜೊತೆ ನಿಲ್ಲುತ್ತೇವೆ ಎಂದಿದ್ದಾರೆ.
ಬಿಪಿಎಸ್ಸಿ 2,031 ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸಿತ್ತು. ಇದರಲ್ಲಿ 200 ಉಪ ವಿಭಾಗ ಮ್ಯಾಜಿಸ್ಟ್ರೇಟರ್ ಹಾಗೂ 136 ಡಿಎಸ್ಪಿ ಹುದ್ದೆಗಳಿದ್ದವು. ರಾಜ್ಯದಲ್ಲಿ ಇತ್ತೀಚಿಗೆ ನಡೆದ ಮಹತ್ವದ ಪರೀಕ್ಷೆಗಳಲ್ಲಿ ಇದು ಪ್ರಮುಖವಾಗಿತ್ತು. ಆದರೆ ಪರೀಕ್ಷೆಯಲ್ಲಿ ಕೇಳಲಾದ ಪರೀಕ್ಷೆಗಳು ಗುಣಮಟ್ಟದ್ದಾಗಿರಲಿಲ್ಲ. ಅಲ್ಲದೇ ಈ ಪ್ರಶ್ನೆಗಳು ಕೋಚಿಂಗ್ ಸಂಸ್ಥೆಯೊಂದು ನೀಡಿದ್ದ ಮಾದರಿ ಪತ್ರಿಕೆಯನ್ನು ಹೋಲುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು.
ಭಾನುವಾರ ಪಟ್ನಾದ ಗಾಂಧಿ ಮೈದಾನದಲ್ಲಿ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಕಿಶೋರ್, ಪ್ರತಿಭಟನೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಅವರ ವಿರುದ್ದ ಹಾಗೂ 700 ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.