ನವದೆಹಲಿ || ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – ಪ್ಲಾಟ್‌ಫಾರ್ಮ್ ಟಿಕೆಟ್ ಬಂದ್, ಹೈ ಸೆಕ್ಯುರಿಟ

ನವದೆಹಲಿ || ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – ಪ್ಲಾಟ್ಫಾರ್ಮ್ ಟಿಕೆಟ್ ಬಂದ್, ಹೈ ಸೆಕ್ಯುರಿಟ

ನವದೆಹಲಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಕಾಲ್ತುಳಿತ (Delhi Railway Station Stampede) ಸಂಭವಿಸಿದ ಬಳಿಕ ರೈಲ್ವೇ ಆಡಳಿತವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೌಂಟರ್‌ನಿಂದ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಮಾರಾಟವನ್ನು ನಿಲ್ಲಿಸಲಾಗಿದ್ದು, ಭದ್ರತೆಯನ್ನು ಹೆಚ್ಚಿಸಿದೆ.

ಎರಡು ದಿನಗಳ ಹಿಂದೆ ದೆಹಲಿ ರೈಲು ನಿಲ್ದಾಣದಲ್ಲಿ ಜನಸಂದಣಿಯಿಂದಾಗಿ ಉಂಟಾದ ಕಾಲ್ತುಳಿತದಲ್ಲಿ 18 ಜನರು ಸಾವನ್ನಪ್ಪಿದ್ದರು. ಘಟನೆಯ ನಂತರ ರೈಲು ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ನಿಲ್ದಾಣದ ಆವರಣದಲ್ಲಿ ಭದ್ರತಾ ಪಡೆಗಳ ಒಂದು ಕಂಪನಿಯನ್ನು ನಿಯೋಜಿಸಲಾಗಿದೆ. ಮೆಟ್ರೋ ಭದ್ರತೆಯಲ್ಲಿ ತೊಡಗಿರುವ ಸಿಐಎಸ್‌ಎಫ್ ಕಂಪನಿಯನ್ನು ರೈಲ್ವೇ ಭದ್ರತೆಗಾಗಿ ನಿಯೋಜಿಸಲಾಗಿದೆ.

ಈ ಬಗ್ಗೆ ಜಂಟಿ ಪೊಲೀಸ್ ಆಯುಕ್ತ ವಿಜಯ್ ಸಿಂಗ್ ಮಾತನಾಡಿ, ದೆಹಲಿ ರೈಲು ನಿಲ್ದಾಣದ ಭದ್ರತೆಗಾಗಿ ಎಂಟು ಕಂಪನಿಗಳ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ. ಜೊತೆಗೆ 80 ಸಿಬ್ಬಂದಿಯನ್ನು ಒಳಗೊಂಡ ಮೆಟ್ರೋ ಪೊಲೀಸ್ ಕಂಪನಿಯನ್ನು ನಿಯೋಜಿಸಲಾಗಿದೆ. ಇದಲ್ಲದೆ, ಮೆಟ್ರೋದಿಂದ ಮೂವರು ಇನ್ಸ್ಪೆಕ್ಟರ್‌ಗಳು ಮತ್ತು ಒಬ್ಬ ಎಸಿಪಿಯನ್ನು ನಿಯೋಜಿಸಲಾಗಿದೆ. ರೈಲ್ವೇ ಪೊಲೀಸ್ ಮತ್ತು ಜಿಆರ್‌ಪಿಯ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಂಟರಿಂದ ಹತ್ತು ರೈಲ್ವೇ ಪೊಲೀಸ್ ಠಾಣೆಗಳ ಮುಖ್ಯಸ್ಥರನ್ನು ನಿಯೋಜಿಸಲಾಗಿದೆ. ದೆಹಲಿ ಪೊಲೀಸ್ ಠಾಣೆ ಮುಖ್ಯಸ್ಥರನ್ನು ಸಹ ಹತ್ತಿರದಲ್ಲೇ ನಿಯೋಜಿಸಲಾಗಿದೆ ಎಂದರು.

ಇದಲ್ಲದೆ ಪ್ರತಿ ಪ್ಲಾಟ್‌ಫಾರ್ಮ್, ಪಾದಚಾರಿ ಸೇತುವೆ ಮತ್ತು ಹೊರಗೆ ಒಂದು ಕಂಪನಿಯನ್ನು ನಿಯೋಜಿಸಲಾಗಿದೆ. ಒಂದು ಕಂಪನಿಯಲ್ಲಿ 80 ರಿಂದ 85 ಭದ್ರತಾ ಸಿಬ್ಬಂದಿಗಳಿದ್ದಾರೆ. ಅಲ್ಲದೆ, ರೈಲ್ವೇ ನಿಲ್ದಾಣದ ಹೊರಗೆ ಮತ್ತು ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ರೈಲು ನಿಲ್ದಾಣದ ಬಳಿ ವಾಹನಗಳನ್ನು ಅನುಮತಿಸಲಾಗುವುದಿಲ್ಲ. ಕುಂಭಮೇಳಕ್ಕೆ ಹೋಗುವ ರೈಲುಗಳು 12, 13 ಮತ್ತು 14ನೇ ಪ್ಲಾಟ್‌ಫಾರ್ಮ್ಗಳಿಂದ ಹೊರಡುತ್ತಿವೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಪ್ರಯಾಗ್‌ರಾಜ್‌ಗೆ ಹೋಗುವ ರೈಲುಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಯಾಗ್‌ರಾಜ್‌ನಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಜನಸಂದಣಿ ಸೇರುತ್ತಿರುವ ಹಿನ್ನೆಲೆ ಮುಂದಿನ ಸೂಚನೆ ಬರುವವರೆಗೂ ರೈಲ್ವೆ ಎಲ್ಲಾ ವಿಐಪಿ ಶಿಷ್ಟಾಚಾರ ರದ್ದು ಮಾಡಿದೆ. ಪ್ರಯಾಗ್‌ರಾಜ್‌ನಲ್ಲಿರುವ ರೈಲ್ವೆ ವಿಶ್ರಾಂತಿ ಗೃಹದ ಎಲ್ಲಾ ಮುಂಗಡ ಬುಕಿಂಗ್ ಬಂದ್ ಮಾಡಿದ್ದು, ರೈಲ್ವೆ ಅಧಿಕಾರಿಗಳು ಪ್ರಯಾಗ್‌ರಾಜ್‌ಗೆ ಭೇಟಿ ನೀಡುತ್ತಿದ್ದಾರೆ. ವಿಐಪಿಗಳ ಶಿಷ್ಟಾಚಾರದಲ್ಲಿ ಕರ್ತವ್ಯ ನಿರ್ವಹಿಸುವ ರೈಲ್ವೆ ನೌಕರರು ಮತ್ತು ಭದ್ರತಾ ಸಿಬ್ಬಂದಿಯನ್ನು ಜವಬ್ದಾರಿಯಿಂದ ವಿಮುಕ್ತಗೊಳಿಸಲಾಗುತ್ತಿದೆ.

ಕಾಲ್ತುಳಿತ ಸಂಭವಿಸಿದ್ದು ಹೇಗೆ?

ಕುಂಭಮೇಳಕ್ಕೆ ಹೊರಟಿದ್ದ ಭಕ್ತರಿಂದ ನವದೆಹಲಿ ರೈಲು ನಿಲ್ದಾಣ ತುಂಬಿ ತುಳುಕುತ್ತಿತ್ತು. ಅದಕ್ಕಾಗಿ 2 ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ರೈಲುಗಳಿಗೂ ಮೊದಲು ಭುವನೇಶ್ವರಕ್ಕೆ ತೆರಳಬೇಕಿದ್ದ ರಾಜಧಾನಿ ಮತ್ತು ಸ್ವತಂತ್ರ ಸೇನಾನಿ ಎಕ್ಸ್ಪ್ರೆಸ್ ರೈಲುಗಳು ತಡವಾಗಿ ನಿಲ್ದಾಣವನ್ನು ತಲುಪಿದವು. ಹೀಗಾಗಿ ರೈಲು ನಿಲ್ದಾಣದಲ್ಲಿ ಒಮ್ಮೆಗೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಯಿತು. ಇದೇ ಸಮಯಕ್ಕೆ ಪ್ಲಾಟ್‌ಫಾರ್ಮ್ 14 ಮತ್ತು 15ಕ್ಕೆ ಪ್ರಯಾಗ್ ರಾಜ್‌ಗೆ ಹೊರಟ ವಿಶೇಷ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಈ ವೇಳೆ ಸಾವಿರಾರು ಜನರು ಏಕಾಏಕಿ ರೈಲಿಗೆ ನುಗ್ಗಿದ್ದಾರೆ. ಹೀಗಾಗಿ ರೈಲಿನ ಒಳಗೆ ಮತ್ತು ಹೊರಗೆ ಕಾಲ್ತುಳಿತ ಸಂಭವಿಸಿದ್ದು, ಈ ಅವಘಡದಲ್ಲಿ 18 ಮಂದಿ ಸಾವಿಗೀಡಾಗಿದ್ದರು.

Leave a Reply

Your email address will not be published. Required fields are marked *