ನವದೆಹಲಿ: ಚುನಾವಣೆಗೆ ದಿನಗಣನೆ ಆರಂಭವಾಗಿರುವ ಕಾರಣ ದೆಹಲಿಯ ಚುನಾವಣಾ ಕಣ ರಂಗೇರಿದೆ. ಈ ಬಾರಿ ಎಎಪಿ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದರಿಂದ ಹಠಕ್ಕೆ ಬಿದ್ದಂತೆ ಮತದಾರರನ್ನು ಸೆಳೆಯುವ ಸಲುವಾಗಿ ಹಲವಾರು ಗ್ಯಾರಂಟಿ ಯೋಜನೆ ಜತೆಗೆ ಹತ್ತಾರು ಭರವಸೆಗಳನ್ನು ನೀಡಿ ಚುನಾವಣಾ ಕಣಕ್ಕಿಳಿದಿವೆ. ಹೀಗಾಗಿ ಮತದಾರರು ಯಾವುದಕ್ಕೆ ಆದ್ಯತೆ ನೀಡಬಹುದು ಎಂಬ ಕುತೂಹಲ ಇಡೀ ದೇಶವನ್ನು ಕಾಡುತ್ತಿದೆ. ಜತೆಗೆ ಮುಂದೆ ನಡೆಯುವ ಎಲ್ಲ ವಿಧಾನಸಭಾ ಚುನಾವಣೆಗಳು ಗ್ಯಾರಂಟಿ ಯೋಜನೆಗಳ ಮೇಲೆಯೇ ನಡೆಯಲಿವೆ ಎಂಬ ಮನ್ಸೂಚನೆಯನ್ನು ನೀಡಿದಂತಿದೆ.
ದೆಹಲಿಯಲ್ಲಿ ಕಳೆದೊಂದು ದಶಕದಿಂದ ಅಧಿಕಾರದಲ್ಲಿರುವ ಎಎಪಿ ಜನರಿಗೆ ಹಲವು ಉಚಿತ ಯೋಜನೆಗಳನ್ನು ನೀಡುವುದರೊಂದಿಗೆ ಗಮನಸೆಳೆದಿದೆ. ಆದರೆ ಭ್ರಷ್ಟಾಚಾರದ ವಿರುದ್ಧ ಹೋರಾಟದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದು ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಆದ ಅರವಿಂದ ಕೇಜ್ರಿವಾಲ್ ರಾಜಕೀಯ ಇತಿಹಾಸದಲ್ಲೊಂದು ಮೈಲುಗಲ್ಲನ್ನು ಸೃಷ್ಟಿಸಿದಿದ್ದರು. ಅಷ್ಟೇ ಅಲ್ಲದೆ ಜನರಲ್ಲಿ ಹೊಸದೊಂದು ಭರವಸೆಯನ್ನು ಮೂಡಿಸಿದ್ದರು. ಆದರೆ ಕಳೆದ ಹತ್ತು ವರ್ಷದ ಅವಧಿಯಲ್ಲಿ ದೆಹಲಿ ಆಡಳಿತದಲ್ಲಾದ ಏರುಪೇರುಗಳು, ಭ್ರಷ್ಟಾಚಾರಗಳು ಎಲ್ಲವೂ ಜನರ ಮುಂದಿವೆ.
ಸ್ವತಃ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೇ ಜೈಲಿಗೆ ಹೋಗಿದ್ದು, ನಂತರ ರಾಜೀನಾಮೆ ನೀಡಿರುವುದು, ಎಲ್ಲವೂ ಮತದಾರರ ಮುಂದಿದೆ. ಇದೆಲ್ಲವೂ ರಾಜಕೀಯ ಪಿತೂರಿ ಎನ್ನುತ್ತಿದ್ದರೂ ಮತದಾರರು ಇದನ್ನು ಹೇಗೆ ನೋಡಲಿದ್ದಾರೆ ಎನ್ನುವುದು ಬಹುಮುಖ್ಯವಾಗಲಿದೆ. ಎಎಪಿ ದೆಹಲಿಯಲ್ಲಿ ಅದೇ ಜನಪ್ರಿಯತೆ ಉಳಿಸಿಕೊಂಡು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾ? ಎಂಬ ಕುತೂಹಲ ದೇಶವನ್ನೇ ಕಾಡುತ್ತಿದೆ. ಇಷ್ಟೇ ಅಲ್ಲದೆ, ದೆಹಲಿ ದೇಶದ ರಾಜಧಾನಿಯಾಗಿರುವ ಕಾರಣದಿಂದಾಗಿ ಎಲ್ಲರ ಕಣ್ಣು ಅತ್ತ ನೆಟ್ಟಿದೆ.
ಕಾಂಗ್ರೆಸ್ಗೆ ಹೋರಾಟ ಅನಿವಾರ್ಯ ಈಗಿರುವ ಅಧಿಕಾರವನ್ನು ಉಳಿಸಿಕೊಂಡು ಮುನ್ನಡೆಯಲು ಎಎಪಿಗೆ ತವಕಿಸುತ್ತಿದ್ದರೆ, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಪಾರುಪತ್ಯೆ ಇರಬೇಕೆಂದು ಹವಣಿಸುತ್ತಿವೆ. ಅದರಲ್ಲೂ ಕಾಂಗ್ರೆಸ್ ಇಂಡಿಯಾ ಒಕ್ಕೂಟದ ಸಹವರ್ತಿ ಪಕ್ಷ ಎನ್ನುವುದನ್ನು ಮರೆತು ಎಎಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದೆ. ಕೇಜ್ರಿವಾಲ್ ಮತ್ತು ಮೋದಿಯನ್ನು ಒಂದೇ ತಕ್ಕಡಿಯಲ್ಲಿಟ್ಟು ದೂಷಿಸುತ್ತಿದೆ. ಇದು ಕಾಂಗ್ರೆಸ್ ಗೆ ಅನಿವಾರ್ಯವಾಗಿದೆ. ಕೇಜ್ರಿವಾಲ್ ಮತ್ತು ಮೋದಿ ಇಬ್ಬರೂ ಒಂದೇ.. ಹೀಗಾಗಿ ಅವರನ್ನು ದೂರವಿಡಿ ಎಂದು ಕಾಂಗ್ರೆಸ್ ಮುಖಂಡ, ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಕರ್ನಾಟಕದ ಗ್ಯಾರಂಟಿ ಯೋಜನೆಯನ್ನು ದೆಹಲಿಯಲ್ಲಿ ಕಾಂಗ್ರೆಸ್ ಘೋಷಿಸಿದೆ. ಸ್ವತಃ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಘೋಷಣೆ ಮಾಡಿ ಬಂದಿದ್ದಾರೆ. ಕರ್ನಾಟಕದಲ್ಲಿ ಮತದಾರರು ಕೈಹಿಡಿದ ರೀತಿಯಲ್ಲಿಯೇ ದೆಹಲಿಯಲ್ಲಿ ಮತದಾರರು ಕಾಂಗ್ರೆಸ್ ನ್ನು ಬೆಂಬಲಿಸಿ ಅಧಿಕಾರಕ್ಕೆ ತರುತ್ತಾರೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ನಾಯಕರು ಹೊಂದಿದ್ದಾರೆ. ಕಾಂಗ್ರೆಸ್ ಗೆ ದೆಹಲಿಯಲ್ಲಿ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ. ಹೀಗಾಗಿಯೇ ಎಎಪಿ ಮತ್ತು ಬಿಜೆಪಿಗೆ ಎದುರು ನಿಂತು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕಾಂಗ್ರೆಸ್ಗೆ ಎಎಪಿಯೇ ಪ್ರಬಲ ವಿರೋಧಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇರುವುದರಿಂದಾಗಿ ಇಲ್ಲಿ ಮೂರು
ಪಕ್ಷಗಳೂ ಎದುರಾಳಿಗಳನ್ನು ಸಮಾನಂತರವಾಗಿ ನೋಡಬೇಕಾಗಿದೆ. ಹೀಗಾಗಿ ಯಾರ ಬಗ್ಗೆಯೂ ಮೆಧು ಧೋರಣೆ ತಾಳುವ ಪ್ರಶ್ನೆಯೇ ಇಲ್ಲದಂತಾಗಿದೆ. ಹೀಗಾಗಿ ಎಎಪಿಯು ಕಾಂಗ್ರೆಸ್ ಮತ್ತು ಬಿಜೆಪಿಯನ್ನೂ, ಬಿಜೆಪಿಯು ಕಾಂಗ್ರೆಸ್ ಮತ್ತು ಎಎಪಿಯನ್ನೂ, ಕಾಂಗ್ರೆಸ್ ಎಎಪಿ ಮತ್ತು ಬಿಜೆಪಿಯನ್ನು ಎದುರಿಸಬೇಕಾಗಿದೆ. ಕಾಂಗ್ರೆಸ್ ಮುಖ್ಯವಾಗಿ ಅಲ್ಪಸಂಖ್ಯಾತರ ಕ್ಷೇತ್ರಗಳನ್ನು ಟಾರ್ಗೆಟ್ ಮಾಡುತ್ತಿದೆ. ಅಷ್ಟೇ ಅಲ್ಲದೆ ಕಾಂಗ್ರೆಸ್ಗೆ ಬಿಜೆಪಿ ಸಾಂಪ್ರದಾಯಿಕ ಎದುರಾಳಿಯಾಗಿದೆ.
ಕಾಂಗ್ರೆಸ್ ಗೆ ಬಿಜೆಪಿಯನ್ನು ಮತ್ತು ಬಿಜೆಪಿ ಸಿದ್ಧಾಂತವನ್ನು ವಿರೋಧಿಸುವವರು ಮತವನ್ನು ನೀಡಿಯೇ ನೀಡುತ್ತಾರೆ ಎಂಬ ನಂಬಿಕೆಯಿದೆ. ಆದರೆ ಅಲ್ಪಸಂಖ್ಯಾತರು, ಹಿಂದುಳಿದವರ ಪೈಕಿ ಹಲವರು ಎಎಪಿ ಕಡೆಗಿದ್ದಾರೆ. ಅವರನ್ನು ಎಳೆದು ತಮ್ಮ ಕಡೆಗೆ ತರುವುದು ಸವಾಲ್ ಆಗಿ ಪರಿಣಮಿಸಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಎಎಪಿ ಪರ ಒಲವಿತ್ತು. ಹೀಗಾಗಿ ಇವತ್ತಿನ ರೀತಿ ಜಿದ್ದಾಜಿದ್ದಿಗೆ ಬಿದ್ದಿರಲಿಲ್ಲ. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಜತೆಗಿದ್ದವರೇ ಹಾವು, ಮುಂಗುಸಿಯಾಗಿದ್ದಾರೆ. ಇದರ ಲಾಭಪಡೆಯಲು ಬಿಜೆಪಿ ಸರ್ಕಸ್ ಮಾಡುತ್ತಿದೆ. ಮತದಾರನ ತೀರ್ಮಾನವೇ ಅಂತಿಮ ಎಎಪಿ ಮತ್ತು ಕಾಂಗ್ರೆಸ್ ಜಿದ್ದಾಜಿದ್ದಿಗೆ ಬಿದ್ದರೆ ಮತಗಳು ಹಂಚಿಕೆಯಾಗುವ ಸಾಧ್ಯತೆಯಿದೆ. ಇದರಿಂದ ಬಿಜೆಪಿ ಒಂದಷ್ಟು ಲಾಭವಾಗುತ್ತದೆ ಎಂಬ ಲೆಕ್ಕಾಚಾರಗಳಿವೆ. ಈಗಿನ ಪರಿಸ್ಥಿತಿಯಲ್ಲಿ ದೆಹಲಿಯ ಮತದಾರರು ಯಾವುದಕ್ಕೆ ಆದ್ಯತೆ ನೀಡುತ್ತಾರೆ ಎಂಬುದೇ ಬಹುಮುಖ್ಯವಾಗಿದೆ. ಗ್ಯಾರಂಟಿ ಯೋಜನೆಗೆ ಆದ್ಯತೆ ನೀಡುವುದಾದರೆ ಭರವಸೆ ಜಾಸ್ತಿ ನೀಡಿದವರಿಗೆ ಮತ ಎಂದು ಪರಿಗಣಿಸಲು ಸಾಧ್ಯವಾಗುತ್ತಾ? ಗೊತ್ತಿಲ್ಲ. ಈ ಚುನಾವಣೆಯಲ್ಲಿ ಮತದಾರರು ಏನನ್ನು ನೋಡಿ ಮತ ನೀಡುತ್ತಾರೆ ಎಂಬುದೇ ಬಹುಮುಖ್ಯವಾಗಿದೆ.
ಒಟ್ಟಾರೆ ದೆಹಲಿಯ ಚುನಾವಣೆ ಹತ್ತು ಹಲವು ವಿಶೇಷತೆಗಳನ್ನು ಹೊಂದಿದ್ದು, ಮೂರು ಪಕ್ಷಗಳಿಗೂ ಪಾಠವಾಗಲಿದೆ. ಜತೆಗೆ ಮತದಾರರು ಏನನ್ನು ನಿರೀಕ್ಷಿಸುತ್ತಾರೆ ಎಂಬುದು ಕೂಡ ಗೊತ್ತಾಗಲಿದೆ. ಇಲ್ಲಿ ಉಚಿತ ಭಾಗ್ಯಗಳು ಕೆಲಸ ಮಾಡುತ್ತವೆಯೋ? ಇಲ್ಲವೋ? ತಿಳಿಯಲಿದೆ. ಸಾಮಾನ್ಯ ಜನರಿಗೆ ರಾಜಕೀಯ ಒಳಸುಳಿಗಳು ಗೊತ್ತಾಗದೆ ಹೋಗಬಹುದು ಆದರೆ ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ವಿಶ್ಲೇಷಿಸುವ ಮತ್ತು ಇದರಿಂದ ನಮಗೆಷ್ಟು ಲಾಭವಾಗಲಿದೆ ಎಂಬುದರ ಲೆಕ್ಕಾಚಾರ ಗೊತ್ತಿದೆ. ಹೀಗಾಗಿ ಕೊನೆಗಳಿಗೆಯಲ್ಲಿ ಆಸೆ, ಆಮಿಷಗಳೆಲ್ಲವನ್ನೂ ಮೀರಿದ ತೀರ್ಮಾನವನ್ನು ಆತ ಮಾಡಲಿದ್ದು ಅದುವೇ ಅಂತಿಮವಾಗಲಿದೆ.