ನವದೆಹಲಿ || ಪಾಕ್ ಜತೆಗಿನ ಸಿಂಧೂ ನದಿ ನೀರು ಒಪ್ಪಂದ ಅಮಾನತು: ಐದು ಮಹತ್ವದ ನಿರ್ಣಯ ಕೈಗೊಂಡ ಪ್ರಧಾನಿ ನೇತೃತ್ವದ ಸಭೆ

ನವದೆಹಲಿ || ಪಾಕ್ ಜತೆಗಿನ ಸಿಂಧೂ ನದಿ ನೀರು ಒಪ್ಪಂದ ಅಮಾನತು: ಐದು ಮಹತ್ವದ ನಿರ್ಣಯ ಕೈಗೊಂಡ ಪ್ರಧಾನಿ ನೇತೃತ್ವದ ಸಭೆ

ನವದೆಹಲಿ: ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ, ಪಾಕಿಸ್ತಾನದ ವಿರುದ್ಧ ಮತ್ತಷ್ಟು ಕಠಿಣವಾಗಿ ವರ್ತಿಸಲು ತೀರ್ಮಾನಿಸಿದೆ. ಈ ಸಂಬಂಧ ಪ್ರಧಾನಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಅಟ್ಟಾರಿ ಗಡಿ ಚೆಕ್ ಪೋಸ್ಟ್ ಮುಚ್ಚುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ ಪಾಕ್ ಜತೆಗಿನ ಸಿಂಧೂ ನದಿ ನೀರು ಒಪ್ಪಂದ ಅಮಾನತು ಮಾಡುವುದಾಗಿ ಘೋಷಿಸಿದೆ.

ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿಯ (ಸಿಸಿಎಸ್) ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಪಾಕ್ ವಿರುದ್ಧ ಮತ್ತಷ್ಟು ಕಠಿಣವಾಗಿ ನಡೆದುಕೊಳ್ಳುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ವಿದೇಶಾಂಗ ಕಾರ್ಯದರ್ಶಿ, ಪ್ರಧಾನಿ ನೇತೃತ್ವದ ಸಭೆ ತೆಗೆದುಕೊಂಡಿರುವ 5 ದೊಡ್ಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ಐದು ಮಹತ್ವದ ನಿರ್ಧಾರಗಳಿವು:

•             ಭಾರತ ಮತ್ತು ಪಾಕಿಸ್ತಾನ ನಡುವಿನ ಅಟ್ಟಾರಿ ಗಡಿ ಚೆಕ್ ಪೋಸ್ಟ್ ಅನ್ನು ಮುಚ್ಚುವ ತೀರ್ಮಾನ ಕೈಗೊಳ್ಳಲಾಗಿದೆ. ಇದು ಎರಡೂ ದೇಶಗಳ ನಡುವಿನ ಸೀಮಿತ ಸಂಚಾರವನ್ನು ಸಹ ನಿಲ್ಲಿಸುವ ಒಂದು ದೊಡ್ಡ ಹೆಜ್ಜೆಯಾಗಿದೆ.

•             ಭಾರತದ ಎರಡನೇ ದೊಡ್ಡ ನಿರ್ಧಾರ ಎಂದರೆ ಅದು ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಮುಚ್ಚುವ ತೀರ್ಮಾನವಾಗಿದೆ.

•             ಮೂರನೇ ತೀರ್ಮಾನದ ಮೂಲಕ ಕಠಿಣ ಹೆಜ್ಜೆ ಭಾಗವಾಗಿ ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಿದೆ. ಮುಂಬರುವ ದಿನಗಳಲ್ಲಿ ಇದು ಪಾಕಿಸ್ತಾನದ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

•             ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ರಾಜತಾಂತ್ರಿಕರಿಗೆ 48 ಗಂಟೆಗಳ ಒಳಗೆ ದೇಶ ತೊರೆಯುವಂತೆ ಆದೇಶಿಸಲಾಗಿದೆ. ಇದು ಪ್ರಧಾನಿ ನೇತೃತ್ವದ ಸಭೆ ಕೈಗೊಂಡ ನಾಲ್ಕನೇ ಅತ್ಯಂತ ಪ್ರಮುಖ ನಿರ್ಧಾರವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದಾರೆ.

•             5. ಐದನೇ ಪ್ರಮುಖ ನಿರ್ಧಾರ ಎಂದರೆ, ಪಾಕಿಸ್ತಾನಿ ನಾಗರಿಕರಿಗೆ ಭಾರತೀಯ ವೀಸಾ ಸಿಗುವುದಿಲ್ಲ.

ಸಾರ್ಕ್ ವೀಸಾ ವಿನಾಯಿತಿ ಯೋಜನೆಯಡಿ ಪಾಕಿಸ್ತಾನಿ ನಾಗರಿಕರಿಗೆ ಭಾರತಕ್ಕೆ ಪ್ರಯಾಣಿಸಲು ಅವಕಾಶವಿರುವುದಿಲ್ಲ. ಈಗಾಗಲೇ ನೀಡಲಾದ ವೀಸಾಗಳನ್ನು ರದ್ದುಗೊಳಿಸಲಾಗಿದ್ದು, ಅವರು 48 ಗಂಟೆಗಳ ಒಳಗೆ ಭಾರತವನ್ನು ತೊರೆಯಬೇಕಾಗುತ್ತದೆ. ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ನಲ್ಲಿರುವ ರಕ್ಷಣಾ, ನೌಕಾ ಮತ್ತು ವಾಯುಪಡೆಯ ಸಲಹೆಗಾರರನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲಾಗಿದೆ. ಅವರು ಒಂದು ವಾರದೊಳಗೆ ದೇಶವನ್ನು ತೊರೆಯಬೇಕಾಗುತ್ತದೆ.

Leave a Reply

Your email address will not be published. Required fields are marked *