ನವದೆಹಲಿ: ಸ್ವಿಸ್ ಬ್ಯಾಂಕ್ನಲ್ಲಿಟ್ಟಿರುವ ಭಾರತೀಯ ಠೇವಣಿ ಹಣ ಮೂರು ಪಟ್ಟು ಹೆಚ್ಚಾಗಿದ್ದು, ಸುಮಾರು 37,6000 ಕೋಟಿ ರೂ ಇದೆ ಎಂದು ಸ್ವಿಟ್ಜರ್ಲೆಂಟ್ ಸೆಂಟ್ರಲ್ ಬ್ಯಾಂಕ್ ಮಾಹಿತಿ ನೀಡಿದೆ.

ಸ್ವಿಸ್ನ ಸ್ಥಳೀಯ ಬ್ರ್ಯಾಂಚ್ ಮತ್ತು ಇತರೆ ಆರ್ಥಿಕ ಸಂಸ್ಥೆಗಳಲ್ಲಿ ಭಾರತೀಯ ಗ್ರಾಹಕರು ಇಟ್ಟಿರುವ ಠೇವಣಿ ಮೊತ್ತ ಶೇ.11ರಷ್ಟು ಜಿಗಿತ ಕಂಡಿದೆ. ಇದು ಬ್ಯಾಂಕ್ನಲ್ಲಿರುವ ಒಟ್ಟು ನಿಧಿಯ ಹತ್ತನೇ ಒಂದು ಭಾಗ ಎಂದು ತಿಳಿಸಿದೆ.
2023ರಲ್ಲಿ ಸ್ವಿಸ್ ಬ್ಯಾಂಕ್ಗಳಲ್ಲಿ ಭಾರತೀಯ ಗ್ರಾಹಕರು ಮತ್ತು ಸಂಸ್ಥೆಗಳು ಇಟ್ಟಿದ್ದ ನಿಧಿಯಲ್ಲಿ ಶೇ.70 ರಷ್ಟು ಕುಸಿತ ಕಂಡುಬಂದಿತ್ತು. ಇದು ನಾಲ್ಕು ವರ್ಷದಲ್ಲಿ ಕನಿಷ್ಠ 1.04 ಬಿಲಿಯನ್ ಸ್ಟಿಸ್ ಫ್ರಾಂಕ್ ತಲುಪಿತ್ತು. ಇದೀಗ ಈ ನಿಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ.
14 ವರ್ಷದಲ್ಲಿ ಭಾರಿ ಏರಿಕೆ: 2021ರಿಂದ ಇದೇ ಮೊದಲ ಬಾರಿಗೆ ಸ್ವಿಸ್ ಬ್ಯಾಂಕ್ನಲ್ಲಿಟ್ಟಿರುವ ಭಾರತೀಯರ ಹಣ ಏರಿಕೆಯಾಗಿದ್ದು, ಇದು 14 ವರ್ಷದಲ್ಲೇ ಅತಿ ಹೆಚ್ಚು (1.83 ಬಿಲಿಯನ್ ಡಾಲರ್) ಎಂಬುದನ್ನು ಗಮನಿಸಬೇಕು.
ಸ್ವಿಸ್ ನ್ಯಾಷನಲ್ ಬ್ಯಾಂಕ್ ಹಂಚಿಕೊಂಡಿರುವ ಈ ಅಂಕಿಅಂಶಗಳ ವರದಿಯನುಸಾರ, ಈ ಹಣ ಭಾರತೀಯರದ್ದು ಮಾತ್ರವಲ್ಲ, ಸ್ವಿಸ್ ಬ್ಯಾಂಕ್ನಲ್ಲಿಟ್ಟಿರುವ ಮೂರನೇ ದೇಶದ ಸಂಸ್ಥೆಗಳು, ಎನ್ಆರ್ಐಗಳ ಹಣವಾಗಿದೆ.
ಸ್ವಿಸ್ ಬ್ಯಾಂಕುಗಳ ಒಟ್ಟು ಹೊಣೆಗಾರಿಕೆಗಳ ದತ್ತಾಂಶದಲ್ಲಿ ಭಾರತೀಯ ಗ್ರಾಹಕರ ಎಲ್ಲಾ ರೀತಿಯ ಹಣವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಇದರಲ್ಲಿ ವೈಯಕ್ತಿಕ, ಬ್ಯಾಂಕುಗಳು ಮತ್ತು ಉದ್ಯಮಗಳ ಠೇವಣಿಗಳು ಸೇರಿವೆ. ಭಾರತದಲ್ಲಿನ ಸ್ವಿಸ್ ಬ್ಯಾಂಕುಗಳ ಶಾಖೆಗಳ ದತ್ತಾಂಶ ಮತ್ತು ಠೇವಣಿಗಳನ್ನು ಈ ಅಂಕಿಅಂಶ ಹೊಂದಿದೆ ಎಂದು ಸ್ವಿಸ್ ಬ್ಯಾಂಕ್ ತಿಳಿಸಿದೆ.