ನ್ಯೂಯಾರ್ಕ್: ಎಂಆರ್ಐ ಯಂತ್ರದೊಳಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದಿದೆ. ಕೀತ್ ಎಂಬ ವ್ಯಕ್ತಿ ಪತ್ನಿಗೆ ಮೊಣಕಾಲಿನ ಸ್ಕ್ಯಾನ್ ಮಾಡಿಸಲು ಆಸ್ಪತ್ರೆಗೆ ಕರೆತಂದಿದ್ದರು. ಅವರನ್ನು ಕೂಡ ಅದೇ ಕೋಣೆಯಲ್ಲಿ ಕೂರಿಸಿದ್ದರು. ಇನ್ನೇನು ಪತ್ನಿ ಯಂತ್ರದಿಂದ ಹೊರಬರಬೇಕು ಎನ್ನುವ ಸಮಯದಲ್ಲಿ ಅವರಿಗೆ ಸಹಾಯ ಮಾಡಲೆಂದು ಪತಿಯನ್ನು ಯಂತ್ರದ ಬಳಿ ಕರೆದಿದ್ದರು. ಕೂಡಲೇ ಇದ್ದಕ್ಕಿದ್ದಂತೆ ಯಂತ್ರ ಕೀತ್ ಅವರನ್ನು ಒಳಗೆ ಎಳೆದುಕೊಂಡಿತ್ತು. ಅದಕ್ಕೆ ಮುಖ್ಯ ಕಾರಣವೆಂದರೆ ಅವರ ಕುತ್ತಿಗೆಯಲ್ಲಿದ್ದ 9 ಕೆಜಿ ತೂಕದ ಚೈನ್.

ಸಾಮಾನ್ಯವಾಗಿ ಎಂಆರ್ಐ ಸ್ಕ್ಯಾನ್ ಮಾಡುವಾಗ ಯಾವುದೇ ಬಗೆಯ ಆಭರಣಗಳನ್ನು ಧರಿಸಬೇಡಿ ಎಂಬುದು ಇದೇ ಕಾರಣಕ್ಕೆ. ಯಂತ್ರದಲ್ಲಿರುವ ಮ್ಯಾಗ್ನೆಟ್ ಈ ವ್ಯಕ್ತಿಯನ್ನು ಎಳೆದಿದೆ. ಅಲ್ಲಿದ್ದವರು ಎಷ್ಟೆ ಪ್ರಯತ್ನಿಸಿದರೂ ಏನೂ ಮಾಡಲು ಸಾಧ್ಯವಾಗಲಿಲ್ಲ.
ಮೃತರ ಪತ್ನಿ ಆಡ್ರಿಯಾನ್ ಜೋನ್ಸ್ ಹೇಳುವಂತೆ ಮೊಣಕಾಲಿನ ಎಂಆರ್ಐ ಮಾಡಿಸಿಕೊಳ್ಳುತ್ತಿದ್ದಾಗ ಪತಿ ಕೀತ್ ಮೇಜಿನಿಂದ ಇಳಿದು ಸಹಾಯ ಮಾಡಲು ಬಂದಾಗ ಇದ್ದಕ್ಕಿದ್ದಂತೆ ಯಂತ್ರವು ಅವರನ್ನು ಎಳೆದುಕೊಂಡಿದೆ. ಆದರೆ ಎಲ್ಲವೂ ಎಷ್ಟು ಬೇಗನೆ ನಡೆಯಿತು ಎಂದರೆ ಯಾರಿಗೂ ಏನೂ ಅರ್ಥವಾಗಲಿಲ್ಲ ನ್ಯೂಯಾರ್ಕ್ನಲ್ಲಿ ಎಂಆರ್ಐ ಯಂತ್ರದಿಂದ ಇದು ಮೊದಲ ಸಾವು ಅಲ್ಲ. ಇಂತಹ ಅಪಘಾತಗಳು ಈ ಹಿಂದೆಯೂ ಸಂಭವಿಸಿವೆ. 2001 ರಲ್ಲಿ, ವೆಸ್ಟ್ಚೆಸ್ಟರ್ ವೈದ್ಯಕೀಯ ಕೇಂದ್ರದಲ್ಲಿ 6 ವರ್ಷದ ಮಗು ಮೈಕೆಲ್ ಕೊಲಂಬಿನಿ ಸಾವನ್ನಪ್ಪಿತ್ತು.