ಒಂದು ರೈಲು ವಿಜಯಪುರಕ್ಕೆ ಬಂದರೂ ಅಚ್ಚರಿ ಇಲ್ಲ: ವಿ.ಸೋಮಣ್ಣ

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿಯವರು 10 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ (Vande Bharat Train) ಚಾಲನೆ ನೀಡಲಿದ್ದಾರೆ. ಈ ಪೈಕಿ ಒಂದು ರೈಲು ಕರ್ನಾಟಕಕ್ಕೆ ಬರಲಿದೆ. ಆ ರೈಲಿನ ಕಾರ್ಯಾಚರಣೆ ಕುರಿತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಮೂಲಕ ಉತ್ತರ ಕರ್ನಾಟಕ ಪ್ರಯಾಣಿಕರ ಕುತೂಹಲ ಹೆಚ್ಚಾಗುವಂತೆ ಮಾಡಿದ್ದಾರೆ.

ಬೆಂಗಳೂರು ಉಪನಗರ ರೈಲ್ವೆ ಯೋಜನೆ ಸೇರಿದಂತೆ, ಬೆಂಗಳೂರು- ಮಂಗಳೂರು ಹಾಗೂ ಹುಬ್ಬಳ್ಳಿ- ಅಂಕೋಲ ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣ ಯೋಜನೆ, ಚಿತ್ರದುರ್ಗ- ಹೊಸಪೇಟೆ- ಆಲಮಟ್ಟಿ ನಡುವೆ ಹೊಸ ರೈಲು ಮಾರ್ಗ ಯೋಜನೆ ಕುರಿತು ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಹಾಗೂ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ ಅವರು ಸೋಮವಾರ ಚರ್ಚಿಸಿದರು.

ಈ ವೇಳೆ ಒಂದಷ್ಟು ರೈಲ್ವೆ ಯೋಜನೆಗಳು, ಜೋಡಿ ಮಾರ್ಗ ನಿರ್ಮಾಣ ಬಗ್ಗೆ ಎಂಬಿ ಪಾಟೀಲ್ ಅವರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ವಿ.ಸೋಮಣ್ಣ ಅವರು, ದೇಶಕ್ಕೆ ಮತ್ತೆ ಹತ್ತು ವಂದೇ ಭಾರತ್ ರೈಲುಗಳು ಬರಲಿವೆ. ಅದರಲ್ಲಿ ರಾಜ್ಯಕ್ಕೆ ಬರುವ ಒಂದು ವಂದೇ ಭಾರತ್ ರೈಲು ಉಸ್ತುವಾರಿ ಸಚಿವರ ತವರು ಜಿಲ್ಲೆ ವಿಜಯಪುರಕ್ಕೆ ಬಂದರೂ ಅಚ್ಚರಿ ಪಡಬೇಕಿಲ್ಲ ಎಂದು ತಿಳಿಸಿದರು.

ಉಪನಗರ ರೈಲ್ವೆ ಯೋಜನೆಯ ಮಹತ್ವದ ಅಪ್ಡೇಟ್ ಕೊಟ್ಟ ವಿ.ಸೋಮಣ್ಣ

ಸದ್ಯದವರೆಗೂ ಹೊಸ ವಂದೇ ಭಾರತ್ ರೈಲು ರಾಜ್ಯದ ಯಾವ ಮಾರ್ಗದಲ್ಲಿ ಸಂಚರಿಸಲಿದೆ ಎಂಬುದು ಇನ್ನೂ ನಿಖರವಾಗಿ ಗೊತ್ತಿಲ್ಲ. ಸಚಿವರ ಜಿಲ್ಲೆ ವಿಜಯಪುರಕ್ಕೇ ಬಂದರೂ ಬರಬಹುದು ಎಂದರು.

ಬೆಂಗಳೂರು-ವಿಜಯಪುರ ರೈಲು: ಸಮಯ ಉಳಿತಾಯ

ಬೆಂಗಳೂರು- ವಿಜಯಪುರ ನಡುವಿನ ರೈಲ್ವೆ ಪ್ರಯಾಣವು ಸದ್ಯ 14 ಗಂಟೆ ಇದ್ದು, ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಕನಿಷ್ಠ ನಾಲ್ಕು ಗಂಟೆ ಕಡಿಮೆ ಮಾಡಬಹುದು. ಅದನ್ನು 10 ಗಂಟೆಗೆ ಇಳಿಸಲು ಕೆಲವು ಮಾರ್ಗೋಪಾಯಗಳ ಕುರಿತು ಸಚಿವ ಪಾಟೀಲರು ಸಭೆಯಲ್ಲಿ ರೈಲ್ವೆ ಅಧಿಕಾರಿಗಳಿಗೆ ವಿವರಿಸಿದರು.

ವಿಜಯಪುರ ಕಡೆಗೆ ಹೋಗುವ ರೈಲುಗಳನ್ನು ಹುಬ್ಬಳ್ಳಿ ಕೇಂದ್ರ ನಿಲ್ದಾಣಕ್ಕೆ ಬರದ ಹಾಗೆ ತಡೆದು, ಹುಬ್ಬಳ್ಳಿ ದಕ್ಷಿಣ ರೈಲ್ವೆ ಸ್ಟೇಷನ್ ನಿಂದ ನೇರವಾಗಿ ಗದಗ ಕಡೆ ಹೋಗುವ ಹಾಗೆ ಮಾಡಬೇಕು. ಗದಗದಲ್ಲೂ ಬೈಪಾಸ್ ಮೂಲಕ ವಿಜಯಪುರದ ಕಡೆ ಹೋಗುವ ಹಾಗೆ ಮಾಡುವುದರಿಂದ ಸಾಕಷ್ಟು ಸಮಯ ಉಳಿತಾಯ ಮಾಡಬಹುದು ಎಂದು ಸಲಹೆ ನೀಡಿದರು.

ಈ ಪರಿಕಲ್ಪನೆಯನ್ನು ರೈಲ್ವೆ ಸಚಿವರು ಪರಿಶೀಲಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು. ಗದಗ ಬೈಪಾಸ್ ಮೂಲಕ ರೈಲು ಹಾದು ಹೋಗಲು ಸ್ಥಳೀಯರ ವಿರೋಧ ಇದೆ ಎಂದು ಅಧಿಕಾರಿಗಳು ಹೇಳಿದ್ದಕ್ಕೆ ಹೊಸ ರೈಲು ಬಿಟ್ಟಾಗ ಆ ಸಮಸ್ಯೆ ಬರುವುದಿಲ್ಲ ಎಂದು ಪಾಟೀಲ ತಿಳಿಸಿದರು.

ಉತ್ತರ ಕರ್ನಾಟಕ ಹೊಸ ರೈಲ್ವೆ ಮಾರ್ಗ

ಧಾರವಾಡ- ಕಿತ್ತೂರು- ಬೆಳಗಾವಿ ನಡುವಿನ ನೇರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನ ಸಮಸ್ಯೆ ಇದ್ದು ಆದಷ್ಟು ಬೇಗ ಭೂಮಿ ಕೊಡಿಸಲು ಕ್ರಮ ವಹಿಸಲಾಗುವುದು. ಈ ನಿಟ್ಟಿನಲ್ಲಿ ಸದ್ಯದಲ್ಲೇ ಸ್ಥಳೀಯ ಜನಪ್ರತಿನಿಧಿಗಳ ಜತೆ ಸಭೆ ನಡೆಸಲಾಗುವುದು ಎಂದು ವಿ.ಸೋಮಣ್ಣ ಅವರಿಗೆ ಸಚಿವರು ಅಭಯ ನೀಡಿದರು.

ಅಲ್ಲದೇ ತುಮಕೂರು- ದಾವಣಗೆರೆ ಮತ್ತು ತುಮಕೂರು- ರಾಯದುರ್ಗ ಯೋಜನೆಗಳನ್ನು ಗುಡುವಿನೊಳಗೆ ಪೂರ್ಣಗೊಳಿಸಲು ಆದ್ಯತೆ ನೀಡಬೇಕಿದೆ. ಬಿಡದಿ- ಕನಕಪುರ- ಚಾಮರಾಜನಗರ ರೈಲ್ವೆ ಯೋಜನೆ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಗಮನ ಹರಿಸಿ ಪುನರ್ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಈ ಮನವಿಗಳಿಗೆ ಸ್ಪಂದಿಸಿದ ವಿ. ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಯೋಜನೆಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಬೆಂಗಳೂರು- ಮಂಗಳೂರು ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣದ ಜತೆಗೆ ಸಕಲೇಶಪುರ- ಸುಬ್ರಹ್ಮಣ್ಯ ನಡುವೆ ಸುರಂಗ ರೈಲ್ವೆ ಮಾರ್ಗ ನಿರ್ಮಾಣದ ಅಗತ್ಯವನ್ನೂ ಸಚಿವರು ರೈಲ್ವೆ ಸಚಿವರ ಗಮನಕ್ಕೆ ತಂದಿದ್ದಾರೆ. ಇತ್ತೀಚೆಗೆ ಮಳೆ ಕಾರಣಕ್ಕೆ ಭೂಕುಸಿತವಾಗಿ, ಹಲವು ಬಾರಿ ಈ ಮಾರ್ಗದಲ್ಲಿ ರೈಲುಗಳ ಸಂಚಾರ ರದ್ದಾಗಿವೆ. ಆದ್ದರಿಂದ ಸುರಂಗ ರೈಲ್ವೆ ಮಾರ್ಗ ನಿರ್ಮಿಸುವ ಕುರಿತು ಚಿಂತನೆ ನಡೆಸಬೇಕಿದೆ ಎಂದು ಸಚಿವರ ಪಾಟೀಲ ಅವರು ಮನವಿ ಮಾಡಿದರು.

Leave a Reply

Your email address will not be published. Required fields are marked *