OG ಟಿಕೆಟ್ ದರ ಹೆಚ್ಚಳ: ಹೈಕೋರ್ಟ್ ಆದೇಶಕ್ಕೂ ಕಣೆಕೊಡದ ಚಿತ್ರಮಂದಿರಗಳು.!

 OG ಟಿಕೆಟ್ ದರ ಹೆಚ್ಚಳ: ಹೈಕೋರ್ಟ್ ಆದೇಶಕ್ಕೂ ಕಣೆಕೊಡದ ಚಿತ್ರಮಂದಿರಗಳು.!

ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ ಇಂದು ದೇಶದ ಹಲವು ರಾಜ್ಯಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ನಿನ್ನೆ ರಾತ್ರಿಯೇ ಪೇಯ್ಡ್ ಪ್ರೀಮಿಯರ್ ಶೋಗಳನ್ನು ದೇಶದ ಹಲವು ಪ್ರಮುಖ ನಗರಗಳಲ್ಲಿ ಆಯೋಜಿಸಲಾಗಿತ್ತು. ಪ್ರೀಮಿಯರ್ ಶೋ ಮಾತ್ರವಲ್ಲದೆ ಅದರ ನಂತರದ ಶೋಗಳ ಟಿಕೆಟ್​​ ದರಗಳನ್ನು ದೊಡ್ಡ ಪ್ರಮಾಣದಲ್ಲಿ ಏರಿಸಿ ಮಾರಾಟ ಮಾಡಲಾಗುತ್ತಿದೆ. ತೆಲಂಗಾಣದಲ್ಲಂತೂ ಒಂದು ಹೆಜ್ಜೆ ಮುಂದೆ ಹೋಗಿ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಟಿಕೆಟ್ ದರ ನಿಗದಿಪಡಿಸಲಾಗಿದೆ.

‘ಓಜಿ’ ಸಿನಿಮಾ ಬಿಡುಗಡೆಗೆ ಮುಂಚೆ ಸಿನಿಮಾದ ಪ್ರೀಮಿಯರ್ ಶೋ, ಬೆನಿಫಿಟ್ ಶೋ ಮತ್ತು ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರದ ಬಳಿ ಅನುಮತಿ ಕೋರಲಾಗಿತ್ತು. ಅದರಂತೆ ತೆಲಂಗಾಣ ಸರ್ಕಾರವು ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಿತ್ತು. ಆದರೆ ಬರಲ ಮಹೇಶ್ ಎಂಬುವರು ಹೈಕೋರ್ಟ್​​ಗೆ ಪಿಟಿಶನ್ ಸಲ್ಲಿಸಿ, ಸರ್ಕಾರದ ಅನುಮತಿಯನ್ನು ಪ್ರಶ್ನೆ ಮಾಡಿದ್ದರು. ಅದರಂತೆ ಹೈಕೋರ್ಟ್, ಟಿಕೆಟ್ ದರ ಹೆಚ್ಚಳಕ್ಕೆ ತಡೆ ನೀಡಿತ್ತು. ಆದರೂ ಸಹ ತೆಲಂಗಾಣದ ಹಲವೆಡೆ ಟಿಕೆಟ್ ಅನ್ನು 500 ರಿಂದ 800 ರೂಪಾಯಿಗಳ ವರೆಗೆ ಮಾರಾಟ ಮಾಡಲಾಗಿದೆ.

ಬರಲ ಮಹೇಶ್ ಎಂಬುವರು ಈ ಹಿಂದೆ ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರ ನೀಡಿದ ಅನುಮತಿಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಹೈಕೋರ್ಟ್, ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರ ಅನುಮತಿ ನೀಡಬಾರದೆಂದು ಸ್ಪಷ್ಟವಾಗಿ ತಿಳಿಸಿತ್ತು. ಟಿಕೆಟ್ ದರ ಹೆಚ್ಚಳಗೊಳಿಸುವುದು ಕಾಯ್ದೆ ಸಂಖ್ಯೆ 120ರ ಉಲ್ಲಂಘನೆ ಎಂದು ಹೇಳಿತ್ತು. ತೆಲಂಗಾಣ ಸರ್ಕಾರವೂ ಸಹ, ತಾವು ಇನ್ನು ಮುಂದೆ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡುವುದಿಲ್ಲ ಎಂದಿತ್ತು. ಆದರೆ ಈಗ ‘ಓಜಿ’ ಸಿನಿಮಾಕ್ಕೆ ಅನುಮತಿ ನೀಡಿದೆ. ಆ ಮೂಲಕ ಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ. ಸರ್ಕಾರ ಮಾತ್ರವಲ್ಲದೆ, ಹಲವಾರು ಚಿತ್ರಮಂದಿರಗಳು ಟಿಕೆಟ್ ದರ ಹೆಚ್ಚಳದ ಮೂಲಕ ಕೋರ್ಟ್ ಆದೇಶವನ್ನು ಉಲ್ಲಂಘಿಸಿವೆ.

ಇಂದೂ ಸಹ ಹೈದರಾಬಾದ್​​​ನಲ್ಲಿ 400-500 ರೂಪಾಯಿಗಳಿಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಹೈದರಾಬಾದ್ ಮತ್ತು ಸುತ್ತಲಿನ ಸಿಂಗಲ್ ಸ್ಕ್ರೀನ್ ಚಿತ್ರಮಂದರಗಳಲ್ಲಿಯೂ ಸಹ ಟಿಕೆಟ್ ದರವನ್ನು 275 ರಿಂದ 300 ನಿಗದಿಗೊಳಿಸಲಾಗಿದೆ. ಕೋರ್ಟ್ ಆದೇಶದ ಹೊರತಾಗಿಯೂ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಇದು ಸಿನಿಮಾ ಪ್ರೇಕ್ಷಕರಿಗೆ ಹೊರೆಯಾಗಿ ಪರಿಣಮಿಸುತ್ತಿದೆ.

‘ಓಜಿ’ ಸಿನಿಮಾನಲ್ಲಿ ಪವನ್ ಕಲ್ಯಾಣ್ ನಾಯಕರಾಗಿ ನಟಿಸಿದ್ದು, ಬಾಲಿವುಡ್ ನಟ ಇಮ್ರಾನ್ ಹಶ್ಮಿ ವಿಲನ್ ಆಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಪ್ರಕಾಶ್ ರೈ, ಭಜರಂಗಿ ಲೋಕಿ ಇನ್ನೂ ಕೆಲವರಿದ್ದಾರೆ. ಪ್ರಿಯಾಂಕಾ ಮೋಹನ್ ನಾಯಕಿ. ಸಿನಿಮಾ ಅನ್ನು ಸುಜಿತ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಡಿವಿವಿ ದಾನಯ್ಯ ಬಂಡವಾಳ ತೊಡಗಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *