ಭಾರತ: ‘ಒಂದು ರಾಷ್ಟ್ರ-ಒಂದು ಚುನಾವಣೆ’ ಜಾರಿಗೆ ತರಲು ಸಂವಿಧಾನ ತಿದ್ದುಪಡಿ ತರುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಡಿಸೆಂಬರ್ 16ರಂದು ಸೋಮವಾರ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಲಿದ್ದಾರೆ.
ಈ ಮಸೂದೆಯೊಂದಿಗೆ ಸೋಮವಾರ ಅರ್ಜುನ್ ರಾಮ್ ಮೇಘವಾಲ್ ಅವರು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ, 2024 ಅನ್ನು ಸಹ ಮಂಡಿದಲಿದ್ದಾರೆ. ಜೊತೆಗೆ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಕಾಯಿದೆ, 1963, ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರ ಕಾಯಿದೆ, 1991 ಮತ್ತು ಜಮ್ಮುಗೆ ತಿದ್ದುಪಡಿ ಮಾಡಲು ಮತ್ತಷ್ಟು ಮಸೂದೆಯನ್ನು ಪರಿಚಯಿಸಲು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, 2019 ಮಸೂದೆಯನ್ನು ಸೋಮವಾರ ಮಂಡನೆ ಮಾಡಲಿದ್ದಾರೆ.
ಒಂದು ರಾಷ್ಟ್ರ-ಒಂದು ಚುನಾವಣೆ ಅಂದರೆ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ (ನಗರ ಅಥವಾ ಗ್ರಾಮೀಣ) ಚುನಾವಣೆಗಳು ಒಂದೇ ವರ್ಷದಲ್ಲಿ ಇಲ್ಲದಿದ್ದರೆ ಒಂದೇ ಸಮಯದಲ್ಲಿ ನಡೆಸುವುದು ಎಂದರ್ಥ. ಇದು ಭಾರತ ಸ್ವಾತಂತ್ರ್ಯ ಪಡೆದ ನಂತರದಿಂದ ರೂಢಿಯಲ್ಲಿತ್ತು. ಕಾಲನಂತರ ಬದಲಾಯಿತು. ಪ್ರಸ್ತುತ ದೇಶವು ಹೊಸ ಒಕ್ಕೂಟದ ಆಡಳಿತವನ್ನು ಆಯ್ಕೆ ಮಾಡುವ ಸಮಯದಲ್ಲಿ ಹೊಸ ಸರ್ಕಾರಕ್ಕಾಗಿ ಕೇವಲ ಏಳು ರಾಜ್ಯಗಳು ಮಾತ್ರ ಮತ ಚಲಾಯಿಸುತ್ತವೆ. ಆಂಧ್ರ ಪ್ರದೇಶ, ಸಿಕ್ಕಿಂ ಮತ್ತು ಒಡಿಶಾದಲ್ಲಿ ಈ ವರ್ಷದ ಆರಂಭದಲ್ಲಿ ಎಲೆಕ್ಷನ್ ನಡೆದವು. ಇದೇ ಸಮಯದಲ್ಲಿ ಏಪ್ರಿಲ್-ಜೂನ್ ಲೋಕಸಭೆ ಚುನಾವಣೆ ಕೂಡ ನಡೆಯಿತು. ಮೂರು ಇತರ ರಾಜ್ಯಗಳಾದ ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ಸಾರ್ವತ್ರಿಕ ಚುನಾವಣೆಯ ವರ್ಷದ ದ್ವಿತಿಯಾರ್ಧದಲ್ಲಿ ಮತದಾನ ನಡೆಯಿತು. ಏಕಕಾಲದಲ್ಲಿ ನಡೆಸಲಾಗದ ಚುನಾವಣೆಗಳಿಗಾಗಿ ಕೇಂದ್ರ ಮತ್ತು ರಾಜ್ಯಗಳು ತಮ್ಮತಮ್ಮ ಬಜೆಟ್ ನಲ್ಲಿ ಕೋಟ್ಯಾಂತರ ಹಣವನ್ನು ಚುನಾವಣೆಗಾಗಿ ಮೀಸಲಿಡಬೇಕಾಗುತ್ತದೆ. ಇದನ್ನು ತಪ್ಪಿಸಲು, ಎಲ್ಲಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಉದ್ದೇಶದಿಂದ, ಈ ಮಸೂದೆಯನ್ನು ಮಂಡನೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಪ್ರಧಾನಿ ಮೋದಿಯವರು ತಮ್ಮ ಎರಡನೇ ಅವಧಿಯಿಂದಲೇ ಈ ಐತಿಹಾಸಿಕ ಚುನಾವಣಾ ಪದ್ದತಿ ಜಾರಿಗೆ ಬರಬೇಕು ಎಂದು ಬಲವಾಗಿ ಪ್ರತಿಪಾದಿಸುತ್ತಾ ಬಂದಿದ್ದಾರೆ. ಆದರೆ ತಮ್ಮದೇ ಕೆಲವು ಮೈತ್ರಿ ಪಕ್ಷದಿಂದ ಬೆಂಬಲ ಸಿಗದೇ ಇರುವುದು ಮತ್ತು ವಿಪಕ್ಷಗಳ ಭಾರೀ ವಿರೋಧದಿಂದಾಗಿ ಮಸೂದೆ ಮಂಡನೆ ಮುಂದಕ್ಕೆ ಹೋಗುತ್ತಲೇ ಇತ್ತು. ಈಗ ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಲು, ಗಂಭೀರ ಹೆಜ್ಜೆಯನ್ನು ಮೋದಿ ಸರ್ಕಾರ ಇಟ್ಟಿದೆ. ಈ ರೀತಿಯ ಚುನಾವಣೆಯು ದೇಶಕ್ಕೆ ಮತ್ತು ಪ್ರತಿ ರಾಜ್ಯಕ್ಕೆ ಹೆಚ್ಚಿನ ಆರ್ಥಿಕ ಹೊರೆ ತಗ್ಗಿಸಲು ಕಾರಣವಾಗುತ್ತದೆ ಎಂದು ಬಿಜೆಪಿ ಹೇಳಿದೆ. ಸರ್ಕಾರಗಳು ಆಡಳಿತದ ಮೇಲೆ ಗಮನ ಕೇಂದ್ರೀಕರಿಸಲು ಮತ್ತು ನೀತಿ ರಚನೆಯನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ ಮತ್ತು ಮತದಾನದ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಅದು ವಾದಿಸಿದೆ. ಆದರೆ ವಿಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಪ್ರತಿಪಕ್ಷಗಳು ಮೊದಲಿನಿಂದಲೂ ಇದನ್ನು ವಿರೋಧಿಸಲು ಬಂದಿವೆ. ಎಎಪಿ ಮತ್ತು ಸಮಾಜವಾದಿ ಪಕ್ಷ ಕೂಡ ಈ ಪ್ರಸ್ತಾಪವನ್ನು ವಿರೋಧಿಸಿದೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ತಮಿಳುನಾಡು ಸಿಎಂ ಎಂಕೆ ಸ್ಪಾಲಿನ್ ಕೂಡ ಪ್ರಸ್ತಾವನೆಗೆ ಕಳವಳ ವ್ಯಕ್ತಪಡಿಸಿದ್ದಾರೆ.