ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ 9 ಅಡಗುತಾಣಗಳ ಮೇಲೆ ಭಾರತೀಯ ಸೇನೆಯು ದಾಳಿ ನಡೆಸಿದೆ. ಈ ಬಗ್ಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಕರ್ನಲ್ ಸೋಫಿಯಾ ಖುರೇಷಿ ಅವರು ಕಾರ್ಯಾಚರಣೆ ಬಗ್ಗೆ ಮಾಹಿತಿ ಹಂಚಿಕೊಂಡರು.

ಈ ಕುರಿತು ಬುಧವಾರ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ, ಕರ್ನಲ್ ಸೋಫಿಯಾ ಖುರೇಶಿ ಮತ್ತು ವಿಂಗ್ ಕಮಾಂಡರ್ ವ್ಯುಮಿಕ ಸಿಂಗ್ ಅವರು ಜಂಟಿ ಸುದ್ದಿಗೋಷ್ಟಿ ನಡೆಸಿದರು.
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಮಿಲಿಟರಿ ಆಪರೇಷನ್ ಸಿಂಧೂರ ಹೆಸರಿನಲ್ಲಿ 9 ಉಗ್ರರ ತಾಣ ಮತ್ತು ತರಬೇತಿ ಸೌಲಭ್ಯ ಶಿಬಿರದ ಮೇಲೆ ದಾಳಿ ನಡೆಸಿದೆ. ಗಡಿಯಾಚೆಗಿನ ಭಯೋತ್ಪಾದನೆಯ ನೇರ ಸಂಪರ್ಕದ ಸಂಬಂಧ ಕುರಿತು ನಿಖರ ಗುಪ್ತಚರ ಮಾಹಿತಿ ಆಧಾರದ ಮೇಲೆ ಎಚ್ಚರಿಕೆಯಿಂದ ಈ ದಾಳಿ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು
ಈ ಹಿಂದೆ ಭಾರತದ ವಿರುದ್ಧ ಭಯೋತ್ಪಾದಕ ದಾಳಿ ರೂಪಿಸಿ, ನಡೆಸಿದ ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಲಾಗಿದೆ. ಲಾಹೋರ್ನಿಂದ ಸುಮಾರು 40 ಕಿಲೋಮೀಟರ್ ಉತ್ತರದಲ್ಲಿರುವ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ತರಬೇತಿ ನೆಲೆಯೂ ಸೇರಿದಂತೆ ಇತರೆಡೆ ಆಪರೇಷನ್ ನಡೆದಿದೆ. 2008ರ ನವೆಂಬರ್ 26ರಂದು ನಡೆದ ಮುಂಬೈ ದಾಳಿಯ ರೂವಾರಿಗಳಾದ ಅಜ್ಮಲ್ ಕಸಬ್ ಮತ್ತು ಡೇವಿಡ್ ಹೆಡ್ಲಿ ಇಲ್ಲಿಂದಲೇ ತರಬೇತಿ ಪಡೆದಿದ್ದರು ಎಂದು ಮಾಹಿತಿ ನೀಡಿದರು.
ಪಹಲ್ಗಾಮ್ನಂತಹ ಗಡಿಯಾಚೆಗಿನ ದಾಳಿಗಳಿಗೆ ಭಾರತವು ತಕ್ಕ ಉತ್ತರ ನೀಡಿದೆ ಎಂದು ಸರ್ಕಾರ ತಿಳಿಸಿದೆ. ಭಾರತ ಭಯೋತ್ಪಾದಕರ ನೆಲೆಗಳನ್ನು ಕೆಡವಲು ಮತ್ತು ನಿಷ್ಕ್ರಿಯಗೊಳಿಸುವುದರ ಮೇಲೆ ಈ ದಾಳಿಯು ಕೇಂದ್ರೀಕರಿಸಿದೆ ಎಂದರು