ಯೆಲ್ಲೋ ಲೈನ್ ಉದ್ಘಾಟನೆ ಬೆನ್ನಲ್ಲೇ ಮಿಲಿಯನ್ ದಾಟಿದ ನಮ್ಮ ಮೆಟ್ರೋ ದೈನಂದಿನ ಪ್ರಯಾಣಿಕರ ಸಂಖ್ಯೆ!

ಯೆಲ್ಲೋ ಲೈನ್ ಉದ್ಘಾಟನೆ ಬೆನ್ನಲ್ಲೇ ಮಿಲಿಯನ್ ದಾಟಿದ ನಮ್ಮ ಮೆಟ್ರೋ ದೈನಂದಿನ ಪ್ರಯಾಣಿಕರ ಸಂಖ್ಯೆ!

ಬೆಂಗಳೂರು : ಹಳದಿ ಲೈನ್ ಮೆಟ್ರೋ ರೈಲಿಗೆ ಚಾಲನೆ ನೀಡಿದ ಬೆನ್ನಲ್ಲೇ ಬೆಂಗಳೂರು ನಮ್ಮ ಮೆಟ್ರೋ ರೈಲಿನ ಪ್ರತಿ ದಿನದ ಪ್ರಯಾಣಿಕರ ಸಂಖ್ಯೆ 10 ಲಕ್ಷ ದಾಟಿದೆ. ನಮ್ಮ ಮೆಟ್ರೋದ ಹಸಿರು, ನೇರಳೆ ಹಾಗೂ ಹಳದಿ ಮಾರ್ಗಗಳ ರೈಲುಗಳಲ್ಲಿ ಒಟ್ಟಾಗಿ ಸೋಮವಾರ 10,48,031 ಮಂದಿ ಪ್ರಯಾಣಿಸಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ  ಮಾಹಿತಿ ನೀಡಿದೆ. ಇದರೊಂದಿಗೆ, ಹಳದಿ ಲೈನ್ ಮೆಟ್ರೋ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದ ಒಂದೇ ದಿನದಲ್ಲಿ ನಮ್ಮ ಮೆಟ್ರೋದಲ್ಲಿ ದಾಖಲೆ ಸಂಖ್ಯೆಯ ಮಂದಿ ಪ್ರಯಾಣಿಸಿದಂತಾಗಿದೆ.

ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯ ವಿವರ (ಆಗಸ್ಟ್ 11)

  • ನೇರಳೆ ಮಾರ್ಗ (ಲೈನ್ 1): 4,51,816 ಪ್ರಯಾಣಿಕರಿಂದ ಸಂಚಾರ.
  • ಹಸಿರು ಮಾರ್ಗ (ಲೈನ್ 2): 2,91,677 ಮಂದಿಯಿಂದ ಸಂಚಾರ
  • ಹೊಸದಾಗಿ ಪ್ರಾರಂಭಿಸಲಾದ ಹಳದಿ ಮಾರ್ಗ (ಲೈನ್ 3): ಮೊದಲ ದಿನದ ವಾಣಿಜ್ಯ ಸೇವೆಯಲ್ಲಿ 52,215 ಪ್ರಯಾಣಿಕರನ್ನು ಒಯ್ದಿದೆ.
  • ಹೆಚ್ಚುವರಿಯಾಗಿ, 2,52,323 ಪ್ರಯಾಣಿಕರು ಇಂಟರ್ಚೇಂಜ್ ನಿಲ್ದಾಣಗಳನ್ನು ಬಳಸಿ ಪ್ರಯಾಣಿಸಿದ್ದಾರೆ.

ಈ ಹಿಂದೆ, 9,66,732 ಮಂದಿ ಪ್ರಯಾಣಿಸಿದ್ದೇ ದಿನವೊಂದರಲ್ಲಿ ನಮ್ಮ ಮೆಟ್ರೋದಲ್ಲಿ ದಾಖಲಾದ ಗರಿಷ್ಠ ಪ್ರಯಾಣಿಕರ ಸಂಖ್ಯೆ ಆಗಿತ್ತು. ಇದು ಜೂನ್ 4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವದ ಸಂದರ್ಭದಲ್ಲಿ ದಾಖಲಾಗಿತ್ತು.

ಜೂನ್ 4 ರಂದು ನೇರಳೆ ಮತ್ತು ಹಸಿರು ಮಾರ್ಗಗಳು (76.95 ಕಿ.ಮೀ. ವ್ಯಾಪ್ತಿ) ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಈಗ ಹಳದಿ ಮಾರ್ಗ ಸೇವೆಯಲ್ಲಿದ್ದು, ಮೆಟರೋ ವ್ಯಾಪ್ತಿ 96 ಕಿ.ಮೀ.ಗೆ ವಿಸ್ತರಣೆಯಾಗಿದೆ. ಒಂದೇ ದಿನದಲ್ಲಿ ಮೆಟ್ರೋದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣಿಸಿದ್ದು ಇದೇ ಮೊದಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ದಾಖಲಾಗಿತ್ತು ಮಾಡಿದೆ.

ಸೋಮವಾರ ಮೆಟ್ರೋದಲ್ಲಿ ಜನಸಂದಣಿ ಹೆಚ್ಚಳಕ್ಕೆ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲದಿಂದ ವಿಳಂಬವಾಗಿದ್ದ ಹಳದಿ ಮಾರ್ಗದ ಉದ್ಘಾಟನೆಯೇ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. 7,160 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮೆಟ್ರೋ ಯೋಜನೆಯ 2 ನೇ ಹಂತದ ಭಾಗವಾಗಿರುವ 19.15 ಕಿಲೋಮೀಟರ್ ಹಳದಿ ಲೈನ್ ಕಾರಿಡಾರ್ ಅನ್ನು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಈ ಮಾರ್ಗವು ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರಕ್ಕೆ ಸಂಪರ್ಕಿಸುತ್ತದೆ, ಇದರಲ್ಲಿ 16 ನಿಲ್ದಾಣಗಳು ಇದ್ದು, ಈ ಲೈನ್ ಪ್ರಮುಖ ವಾಣಿಜ್ಯ ಮತ್ತು ಐಟಿ ವಲಯಗಳ ಮೂಲಕ ಹಾದುಹೋಗುತ್ತದೆ.

Leave a Reply

Your email address will not be published. Required fields are marked *