ಚೊಚ್ಚಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ವೇಗಿ ಮಯಾಂಕ್ ಯಾದವ್

ಚೊಚ್ಚಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ವೇಗಿ ಮಯಾಂಕ್ ಯಾದವ್

ಗ್ವಾಲಿಯರ್ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾನುವಾರ ನಡೆದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳ ಅಮೋಘ ಜಯ ದಾಖಲಿಸಿತು. ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಯುವ ವೇಗಿ ಮಯಾಂಕ್ ಯಾದವ್, ಚೊಚ್ಚಲ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನದ ಮೂಲಕ ವಿಶೇಷ ದಾಖಲೆಯ ಕ್ಲಬ್ಗೆ ಸೇರ್ಪಡೆಗೊಂಡರು.

ಇಂಡಿಯನ್ ಪ್ರೀಮಿಯರ್ ಲೀಗ್ನ ಕಳೆದ ಆವೃತ್ತಿಯಲ್ಲಿ ಭರ್ಜರಿ ಬೌಲಿಂಗ್ ತೋರಿದ್ದ ಮಯಾಂಕ್ ಗಾಯದ ಬಳಿಕ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. 22ರ ಹರೆಯದ ಯುವ ಬೌಲರ್ ಮೊದಲ ಬಾರಿಗೆ ಭಾರತ ತಂಡದ ಜರ್ಸಿಯಲ್ಲಿ ಮೈದಾನಕ್ಕಿಳಿದರು. ಪವರ್ಪ್ಲೇಯ ಅಂತಿಮ ಓವರ್ನಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಚೆಂಡನ್ನು ಮಯಾಂಕ್ ಕೈಗಿತ್ತರು.

ತಮ್ಮ ಚೊಚ್ಚಲ ಓವರ್ನಲ್ಲಿ ವೇಗ ಮತ್ತು ನಿಖರತೆ ಕಾಯ್ದುಕೊಂಡ ಮಯಾಂಕ್, ಮೇಡನ್ ಓವರ್ ಮಾಡುವಲ್ಲಿ ಸಫಲರಾದರು. ಬ್ಯಾಟರ್ ತೌಹಿದ್ ಹೃದಯ್ ಒಂದೇ ಒಂದು ರನ್ ಗಳಿಸಲು ವಿಫಲವಾದರು. ಇದರಿಂದ ಟಿ20 ಮಾದರಿಯಲ್ಲಿ ತಾವಾಡಿದ ಮೊದಲ ಓವರ್ನಲ್ಲೇ ಮೇಡನ್ ಮಾಡಿದ ಮೂರನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಮಯಾಂಕ್ ಪಾತ್ರರಾದರು.

ಐಪಿಎಲ್ ಬಳಿಕ ಮತ್ತೊಮ್ಮೆ ವೇಗದ ಮೂಲಕ ಅಲೆ ಎಬ್ಬಿಸಿದ ಮಯಾಂಕ್, ನಾಲ್ಕು ಓವರ್ಗಳ ಸ್ಪೆಲ್ನಲ್ಲಿ 5.20ರ ಎಕಾನಮಿಯಲ್ಲಿ 21 ರನ್ ನೀಡಿ ಒಂದು ವಿಕೆಟ್ ಕಿತ್ತರು. ಬಾಂಗ್ಲಾದೇಶದ ಅನುಭವಿ ಆಲ್ರೌಂಡರ್ ಮಹಮ್ಮದುಲ್ಲಾ ಅವರ ಮೊದಲ ಟಿ20 ಬಲಿಯಾದರು. ಮೊದಲ ಓವರ್ನಲ್ಲಿ 146.1 ಕಿ.ಮೀ ವೇಗದ ಎಸೆತದೊಂದಿಗೆ ಗ್ವಾಲಿಯರ್ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದರು.

ಮಯಾಂಕ್ ಜೊತೆಗೆ ಬೌಲಿಂಗ್ನಲ್ಲಿ ಅರ್ಶದೀಪ್ ಸಿಂಗ್ ಹಾಗೂ ಸ್ಪಿನ್ನರ್ ವರುಣ್ ಚಕ್ರವರ್ತಿ ಮಿಂಚಿನ ದಾಳಿ ನಡೆಸಿ, ತಲಾ ಮೂರು ವಿಕೆಟ್ ಪಡೆದರು. ಕರಾರುವಾಕ್ ಬೌಲಿಂಗ್ಗೆ ಸಿಲುಕಿದ ಬಾಂಗ್ಲಾ ತಂಡ 127 ರನ್ಗಳಿಗೆ ಆಲೌಟ್ ಆಯಿತು. ಸಾಧಾರಣ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 11.5 ಓವರ್ಗಳಲ್ಲೇ 3 ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು

Leave a Reply

Your email address will not be published. Required fields are marked *