‘ಹಿಟ್: ದಿ ಥರ್ಡ್ ಕೇಸ್’ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಚಿತ್ರದ ನಿರ್ಮಾಣದಲ್ಲಿ ಸಂಬಂಧ ಹೊಂದಿರುವ ಪ್ರದೇಶವಾದ ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿ ಬಗ್ಗೆ ನಟ ನಾನಿ ತೀವ್ರ ದುಃಖದ ಜೊತೆಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮೇ 1ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಈ ಬಹುನಿರೀಕ್ಷಿತ ಚಿತ್ರದ ಪ್ರಚಾರವನ್ನಿಂದು ಚಿತ್ರತಂಡ ಬೆಂಗಳೂರಿನಲ್ಲಿ ನಡೆಸಿತು. ನಾನಿ ಮಾತನಾಡಿ, ಆ ಘಟನೆ ಇಡೀ ತಂಡದ ಮೇಲೆ ಬೀರಿದ ಭಾವನಾತ್ಮಕ ಪರಿಣಾಮವನ್ನು ವಿವರಿಸಿದರು.

26 ಜನರ ಪ್ರಾಣವನ್ನು ಬಲಿ ತೆಗೆದುಕೊಂಡ ಈ ಉಗ್ರರ ದಾಳಿ, ಹಿಟ್ 3 ತಂಡ ಸುಮಾರು ಮೂರು ವಾರಗಳ ಕಾಲ ಪಹಲ್ಗಾಮ್ನಲ್ಲಿ ಚಿತ್ರೀಕರಣ ನಡೆಸಿದ ಕೆಲವೇ ತಿಂಗಳುಗಳ ಅಂತರದಲ್ಲಿ ಸಂಭವಿಸಿದೆ. ಅಲ್ಲಿನ ತಮ್ಮ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ, ನಾನಿ, ಸ್ಥಳೀಯರ ಆತ್ಮಿಯತೆ ಮತ್ತು ಪ್ರದೇಶದ ಪ್ರಶಾಂತ ಸೌಂದರ್ಯದ ಬಗ್ಗೆ ಮಾತನಾಡಿದರು.
“ಅದು ಆ ಸ್ಥಳದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆಯೆಂದು ನಾನು ಭಾವಿಸುತ್ತೇನೆ. ಇತ್ತೀಚೆಗೆ ನಡೆದಿರುವುದು ಅತ್ಯಂತ ನೋವಿನ ವಿಷಯ. ಅದು ಹೃದಯವಿದ್ರಾವಕ ಘಟನೆ. ಅದು ನಿಜವಾಗಿಯೂ ನಮ್ಮೆಲ್ಲರ ಮೇಲೆ ಭಾರಿ ಪರಿಣಾಮ ಬೀರಿದೆ” ಎಂದು ತಿಳಿಸಿದರು.
ಚಿತ್ರೀಕರಣದ ಸಮಯದಲ್ಲಿ ಆ ಪ್ರದೇಶವು ಎಷ್ಟು ಶಾಂತಿಯುತ ಮತ್ತು ಸ್ವಾಗತಾರ್ಹವಾಗಿತ್ತು ಎಂಬ ಕಾರಣದಿಂದಾಗಿ, ಇತ್ತೀಚಿನ ದುರ್ಘಟನೆ ತಮ್ಮನ್ನು ಹೇಗೆ ಕಾಡುತ್ತಿದೆ ಎಂಬುದನ್ನು ನಟ ವಿವರಿಸಿದರು. ನಾವೆಲ್ಲರೂ ನೋವಿನಲ್ಲಿದ್ದೇವೆ. ಅದು ನಮ್ಮನ್ನು ಕಾಡುತ್ತಿದೆ. ನಾವು ಎಷ್ಟು ದುರ್ಬಲರು ಎಂಬುದನ್ನು ನಮಗೆ ನೆನಪಿಸುತ್ತಿದೆ ಎಂದು ಹೇಳಿದರು.