ನ್ಯೂಯಾರ್ಕ್ (ಯುಎಸ್): ಭಾರತ ತಂಡ ಪಾಕಿಸ್ತಾನದ ವಿರುದ್ಧ ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಏಳನೇ ಗೆಲುವು ದಾಖಲಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ದೇಶದ ಹಲವೆಡೆ ಕ್ರಿಕೆಟ್ ಪ್ರಿಯರು ಸಾಂಪ್ರದಾಯಿಕ ಎದುರಾಳಿಯ ವಿರುದ್ಧದ ಜಯವನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅತ್ತ ಪಾಕ್ನಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದ್ದು, ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ನಿರಾಸೆಗೆ ಒಳಗಾಗಿದ್ದಾರೆ. ಅದರಲ್ಲೂ ಅಭಿಮಾನಿಯೊಬ್ಬ ನ್ಯೂಯಾರ್ಕ್ನಲ್ಲಿ ಪಂದ್ಯ ವೀಕ್ಷಣೆಗೆ ತನ್ನ ಟ್ರ್ಯಾಕ್ಟರ್ ಅನ್ನೇ ಮಾರಾಟ ಮಾಡಿದ್ದು, ತಂಡವು ಸೋತಿದ್ದರಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ಪಾಕ್ಗೆ ಮತ್ತೊಮ್ಮೆ ಮಾರಕವಾಗಿ ಪರಿಣಮಿಸಿದ ವೇಗಿ ಜಸ್ಪ್ರೀತ್ ಬುಮ್ರಾ (14ಕ್ಕೆ 3) ಗೆಲುವಿನ ಕನಸಿಗೆ ತಣ್ಣೀರೆರಚಿದರು. ಪಾಕಿಸ್ತಾನದ ಬ್ಯಾಟರ್ಗಳ ಮೇಲೆ ಒತ್ತಡ ಹೇರಿದ್ದಲ್ಲದೇ, ಮೂರು ವಿಕೆಟ್ಗಳನ್ನು ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬ್ಯಾಟಿಂಗ್ನಲ್ಲಿ ಮಿಂಚಿದ ರಿಷಭ್ ಪಂತ್ ಅಮೂಲ್ಯ 42 ರನ್ ಬಾರಿಸಿದ್ದಲ್ಲದೇ, ಕೀಪಿಂಗ್ನಲ್ಲಿ ಮೂರು ಉತ್ತಮ ಕ್ಯಾಚ್ಗಳನ್ನು ಹಿಡಿದು ತಂಡದ ಮೇಲುಗೈಗೆ ನೆರವಾಗಿದ್ದರು. ಅಮೆರಿಕದ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಭಾರತವು ದಾಖಲೆಯ ವಿಜಯ ಸಾಧಿಸಿ, ಎ ಗ್ರೂಪ್ನಲ್ಲಿ ಅಗ್ರಸ್ಥಾನದಲ್ಲಿದೆ.
ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅಭಿಮಾನಿ, “ನಾನು 3,000 ಅಮೆರಿಕನ್ ಡಾಲರ್ ಮೌಲ್ಯದ ಟಿಕೆಟ್ ಪಡೆಯಲು ನನ್ನ ಟ್ರ್ಯಾಕ್ಟರ್ ಮಾರಾಟ ಮಾಡಿದ್ದೇನೆ. ಭಾರತದ ಸ್ಕೋರ್ ನೋಡಿದಾಗ ನಮ್ಮ ತಂಡವು ಸೋಲುತ್ತದೆ ಎಂದು ಭಾವಿಸಿರಲಿಲ್ಲ. ಪಾಕ್ ಜಯ ಸಾಧಿಸಬಹುದಾದ ಮೊತ್ತ ಎಂದುಕೊಂಡಿದ್ದೆ. ಗೆಲುವು ನಮ್ಮ ಕೈಯಲ್ಲಿತ್ತು. ಆದರೆ, ಬಾಬರ್ ಆಜಮ್ ಔಟಾದ ಬಳಿಕ ಪಂದ್ಯ ತಿರುಗಿತು. ಗೆಲುವಿಗಾಗಿ ನಾನು ಭಾರತೀಯ ಅಭಿಮಾನಿಗಳನ್ನು ಅಭಿನಂದಿಸುತ್ತೇನೆ” ಎಂದು ಹೇಳಿದರು.