ಗಡಿಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸಿಕೊಂಡು ಬಂದಿರುವ ಪಾಕ್ ಪಡೆಯ ಅಪ್ರಚೋದಿತ ಶೆಲ್ ದಾಳಿಯಿಂದ 7 ಜನ ನಾಗರಿಕರು ಸಾವನ್ನಪ್ಪಿದ್ದಾರೆ. ಜೊತೆಗೆ, ವಿವಿಧೆಡೆ 38 ಜನರಿಗೆ ಗಾಯಗಳಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಪಾಕಿಸ್ತಾನ ಸೇನೆ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ (LoC) ಮತ್ತು ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ, ಫಿರಂಗಿ ಶೆಲ್ ದಾಳಿಯನ್ನು ನಡೆಸಿದ ಪರಿಣಾಮ 7 ಜನರು ಮೃತರಾಗಿದ್ದಾರೆ. ಈ ದಾಳಿ ಮೇ 6-7ರ ರಾತ್ರಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಮೇ 06-07ರ ರಾತ್ರಿ, ಪಾಕಿಸ್ತಾನ ಸೇನೆ ಜಮ್ಮು ಮತ್ತು ಕಾಶ್ಮೀರದ ಎದುರಿನ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಗುಂಡಿನ ದಾಳಿ ಮತ್ತು ಫಿರಂಗಿ ಶೆಲ್ ದಾಳಿಯನ್ನು ನಡೆಸಿತು. ಈ ದಾಳಿಯಲ್ಲಿ ಮುಗ್ಧ ನಾಗರಿಕರು ಸಾವನ್ನಪ್ಪಿದ್ದಾರೆ. ಭಾರತೀಯ ಸೇನೆಯು ಸಮ ಪ್ರಮಾಣದಲ್ಲಿ ಪ್ರತಿಕ್ರಿಯಿಸುತ್ತಿದೆ” ಎಂದು ಸೇನೆಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಆಪರೇಷನ್ ಸಿಂಧೂರ ಬಳಿಕ ದಾಳಿ: ಭಾರತವು ಆಪರೇಷನ್ ಸಿಂಧೂರ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ (ಪಿಒಜೆಕೆ) ಭಯೋತ್ಪಾದಕರ ತಾಣಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಪಾಕ್ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದೆ.
ಉಗ್ರರ ಹುಟ್ಟಡಗಿಸಿದ ಆ. ಸಿಂಧೂರ್: 1971ರ ಭಾರತ-ಪಾಕಿಸ್ತಾನ ಯುದ್ಧದ ಬಳಿಕ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಅತ್ಯಂತ ಪರಿಣಾಮಕಾರಿ ದಾಳಿ ಇದಾಗಿದೆ. ಐದು ದಶಕಗಳಲ್ಲಿ ಪಾಕಿಸ್ತಾನದ ಭೂ ಪ್ರದೇಶದೊಳಗೆ ನಡೆಸಿದ ಅತ್ಯಂತ ಮಹತ್ವದ ಮಿಲಿಟರಿ ಕಾರ್ಯಾಚರಣೆ ಇದಾಗಿದೆ ಎಂದು ಮಾಧ್ಯಮ ವರದಿ ಹೇಳಿದೆ.