ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವೂ ಜು. 2ರಿಂದ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲೆ ಗೆಲುವು ಸಾಧಿಸಲೆಂದು ಗಿಲ್ ಪಡೆ ನೆಟ್ಸ್ನಲ್ಲಿ ಬೆವರು ಸುರಿಸುತ್ತಿದೆ. ಲೀಡ್ಸ್ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಸೋಲಿನ ಬಳಿಕ 1-0 ಅಂತರದಿಂದ ಹಿನ್ನಡೆ ಸಾಧಿಸಿರುವ ಭಾರತ ಎರಡನೇ ಪಂದ್ಯದಲ್ಲಿ ಗೆದ್ದು ಸಮಬಲ ಸಾಧಿಸಲು ತಯಾರಿ ನಡೆಸುತ್ತಿದೆ.

ಆದಾಗ್ಯೂ, ಬರ್ಮಿಂಗ್ಹ್ಯಾಮ್ನಲ್ಲಿ ಟೀಮ್ ಇಂಡಿಯಾದ ಹಿಂದಿನ ದಾಖಲೆ ಉತ್ತಮವಾಗಿಲ್ಲ. ತಂಡವು ಈ ಮೈದಾನದಲ್ಲಿ ಈವರೆಗೆ ಎಂಟು ಟೆಸ್ಟ್ ಪಂದ್ಯಗಳನ್ನು ಆಡಿದ್ದು ಈ ಪೈಕಿ ಏಳರಲ್ಲಿ ಸೋಲನ್ನು ಕಂಡಿದೆ ಮತ್ತು ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಇದು ವರೆಗೂ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಭಾರತಕ್ಕೆ ಸಾಧ್ಯವಾಗಿಲ್ಲ. ಇದೀಗ ಯುವ ಪಡೆ ಮುಂದಿನ ಟೆಸ್ಟ್ ಗೆಲ್ಲುವ ಮೂಲಕ ಈ ಮೈದಾನದಲ್ಲಿ ಇತಿಹಾಸ ಸೃಷ್ಟಿಸಲು ಮುಂದಾಗಿದೆ. ಮತ್ತೊಂದೆಡೆ ರಿಷಭ್ ಪಂತ್ ಅವರ ಮೇಲೂ ನಿರೀಕ್ಷೆಗಳು ಹೆಚ್ಚಿವೆ.
ಭಾರತ ಈ ಮೈದಾನದಲ್ಲಿ ಕೊನೆಯ ಬಾರಿ ಆಡಿದಾಗ ಪಂತ್ ಶತಕ ಸಿಡಿಸಿದ್ದರು. 2022ರಲ್ಲಿ ನಡೆದ ಆ ಪಂದ್ಯದಲ್ಲಿ, ಪಂತ್ ಮೊದಲ ಇನ್ನಿಂಗ್ಸ್ನಲ್ಲಿ 146 ರನ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 57 ರನ್ ಬಾರಿಸಿದ್ದರು. ಇದೀಗ ಬುಧವಾರ ನಡೆಯಲಿರುವ ಎರಡನೇ ಟೆಸ್ಟ್ನಲ್ಲಿ ಶತಕ ಬಾರಿಸಿದರೇ ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಎರಡು ಹಿಂದಿಕ್ಕಲಿದ್ದಾರೆ.
ದಾಖಲೆ ಸನಿಹದಲ್ಲಿ ರಿಷಭ್: ಪಂತ್ ಇದುವರೆಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಒಟ್ಟು ಐದು ಶತಕಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಇಂಗ್ಲೆಂಡ್ ನೆಲದಲ್ಲಿ ನಾಲ್ಕು ಶತಕ ಸೇರಿದ್ದರೇ ಭಾರತದಲ್ಲಿ ಒಂದು ಶತಕ ಸೇರಿದೆ. ಇದೀಗ ಇನ್ನೊಂದು ಶತಕ ಬಾರಿಸಿದರೇ ಇಂಗ್ಲೆಂಡ್ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್ಮನ್ ಆಗಲಿದ್ದಾರೆ. ಪ್ರಸ್ತುತ, ಅವರು ಸಚಿನ್ ಮತ್ತು ದಿಲೀಪ್ ವೆಂಗ್ಸರ್ಕರ್ ಅವರೊಂದಿಗೆ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಮೂವರು ಇಂಗ್ಲೆಂಡ್ ನೆಲದಲ್ಲಿ ತಲಾ ನಾಲ್ಕು ಶತಕಗಳನ್ನು ಸಿಡಿಸಿದ್ದಾರೆ. ದ್ರಾವಿಡ್ 6 ಶತಕದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.