ಬೆಂಗಳೂರು: ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಕಪಾಳಮೋಕ್ಷ ಮಾಡಿ ‘ಬಿಡಬೇಡಿ ಅವನನ್ನು ಹೊಡೆದು ಸಾಯಿಸಿ’ ಎಂದು ಹೇಳಿದ್ದರಿಂದಲೇ ನಟ ದರ್ಶನ್ ಅಂಡ್ ಗ್ಯಾಂಗ್ ಆ ಹತ್ಯೆ ಮಾಡಿರುವುದಾಗಿ ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಅಪಹರಿಸಿ ಪಟ್ಟಣಗೆರೆ ಶೆಡ್ಗೆ ದರ್ಶನ್ ಹಾಗೂ ಇತರ ಆರೋಪಿಗಳೊಂದಿಗೆ ತೆರಳಿದ್ದ ಎ1 ಪವಿತ್ರಾಗೌಡ ತನಗೆ ಇನ್ಸ್ಟ್ರಾಗ್ರಾಮ್ ಮೂಲಕ ಅಶ್ಲೀಲವಾಗಿ ಮೇಸೆಜ್ ಕಳುಹಿಸಿದ್ದ ರೇಣುಕಾಸ್ವಾಮಿಯನ್ನು ಕಂಡು ಹೌಹಾರಿದ್ದರು. ಸ್ಥಳದಲ್ಲಿದ್ದ ದರ್ಶನ್, ಕೆಟ್ಟದಾಗಿ ಮೇಸೆಜ್ ಮಾಡಿದವನು ಈತನೇ ಎಂದು ತೋರಿಸಿ, ಕೋಪ ತಣ್ಣಗಾಗುವರೆಗೂ ಹೊಡಿ ಎಂದು ಪವಿತ್ರಾರಿಗೆ ಹೇಳಿದ್ದಾರೆ.
‘ನಾನು ಕೋಪದಲ್ಲಿ ಧರಿಸಿದ್ದ ಚಪ್ಪಲಿಯಿಂದ ರೇಣುಕಾಸ್ವಾಮಿಯ ಕಪಾಳ ಹಾಗೂ ಮುಖಕ್ಕೆ ಹೊಡೆದು ನಂತರ ಆತನನ್ನ ಬಿಡಬೇಡಿ, ಸಾಯಿಸಿ ಎಂದು ಹೇಳಿದೆ. ಅಲ್ಲಿದ್ದವರೆಲ್ಲರೂ ಆತನ ಮೇಲೆ ಹಲ್ಲೆ ಮಾಡಿದರು. ಈ ವೇಳೆ ದರ್ಶನ್ ಮನೆಗೆ ಹೊರಡುವಂತೆ ಸೂಚಿಸಿದ್ದರಿಂದ ನಾನು ಮನೆಗೆ ಬಂದೆ” ಪವಿತ್ರಾ ಹೇಳಿಕೆ ನೀಡಿದ್ದು, ಚಾರ್ಜ್ಶೀಟ್ನಲ್ಲಿ ಪೊಲೀಸರು ದಾಖಲಿಸಿದ್ದಾರೆ.
ದರ್ಶನ್ ಸೇರಿ ಹಲವರಿಂದ ಮಾರಣಾಂತಿಕ ಹಲ್ಲೆ: ಅಪಹರಿಸಿ ಕರೆತಂದಿದ್ದ ರೇಣುಕಾಸ್ವಾಮಿಗೆ ತಾನು ಹೊಡೆದ ಬಳಿಕ ದರ್ಶನ್, ಪವನ್, ನಾಗರಾಜ್, ನಂದೀಶ್ ಹಾಗೂ ರಾಘವೇಂದ್ರ ಸೇರಿ ಇತರೆ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇವನಿಗೆ ಸರಿಯಾಗಿ ಬುದ್ದಿ ಕಲಿಸುತ್ತೇನೆ, ನೀನು ಮನೆಗೆ ಹೊರಡು ಎಂದು ದರ್ಶನ್ ಸೂಚಿಸಿದ್ದರಿಂದ ನಾನು ಮನೆಗೆ ಬಂದೆ ಎಂದು ಪವಿತ್ರಾ ಹೇಳಿಕೆ ನೀಡಿದ್ದಾರೆ. ಇದೇ ದಿನ ರಾತ್ರಿ 9.30ಕ್ಕೆ ಹತ್ಯೆ ವಿಷಯ ದರ್ಶನ್ ಹಾಗೂ ಪವನ್ ಮೂಲಕ ತಿಳಿಯಿತು. ಇದಕ್ಕೂ ಮುನ್ನ ಜೂನ್.8ರಂದು ಮಧ್ಯಾಹ್ನ 1.30ರ ಸುಮಾರಿಗೆ ದರ್ಶನ್ ಕರೆ ಮಾಡಿ ನಿನಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ವ್ಯಕ್ತಿಯನ್ನು ನಮ್ಮ ಹುಡುಗರು ಪತ್ತೆ ಹಚ್ಚಿದ್ದಾರೆ. ಆತನನ್ನ ಪಟ್ಟಣಗೆರೆ ಶೆಡ್ ನಲ್ಲಿ ಇರಿಸಲಾಗಿದ್ದು ಆತನಿಗೆ ಬುದ್ದಿ ಕಲಿಸೋಣ ಬಾ ಎಂದು ಕರೆದಿದ್ದರು. ಇದರಂತೆ ದರ್ಶನ್ ಕಾರಿನಲ್ಲಿ ತಾನು ಕುಳಿತುಕೊಂಡು ಶೆಡ್ಗೆ ಹೋಗಿದ್ದೆ ಎಂದು ಪವಿತ್ರಾ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ಪೊಲೀಸರು ನಮೂದಿಸಿದ್ದಾರೆ.
ಸ್ನೇಹಿತೆಗೆ ಕರೆ ಮಾಡಿ ಖುಷಿ ಹಂಚಿಕೊಂಡ ಪವಿತ್ರಾ: ಅಶ್ಲೀಲವಾಗಿ ಮೆಸೇಜ್ ಕಳುಹಿಸುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಂತೆ ಮನೆ ಕೆಲಸಗಾರ ಪವನ್ಗೆ ಸೂಚಿಸಿದ್ದರು. ಚಿತ್ರದುರ್ಗದ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಅಂಡ್ ಟೀಮ್ ರೇಣುಕಾಸ್ವಾಮಿಯನ್ನು ಪತ್ತೆ ಹಚ್ಚಿ ಆತನನ್ನು ಅಪಹರಿಸಿ ಕರೆತರುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಸ್ನೇಹಿತೆಗೆ ಕರೆ ಮಾಡಿ ಖುಷಿ ಹಂಚಿಕೊಂಡಿದ್ದರು. ರೇಣುಕಾಸ್ವಾಮಿಗೆ ಬುದ್ದಿ ಕಲಿಸಲು ಸ್ವತಃ ದರ್ಶನ್ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದರು.
ಶೆಡ್ಗೆ ತೆರಳಿ ರೇಣುಕಾಸ್ವಾಮಿಯನ್ನು ನೋಡುತ್ತಿದ್ದಂತೆ ಕೆಂಡಕಾರಿದ ಪವಿತ್ರಾ ನನಗೆ ಅಶ್ಲೀಲ ಮೇಸೆಜ್ ಕಳುಹಿಸಿದ್ದಿಯಾ ? ಪ್ರೈವೇಟ್ ಪಾರ್ಟ್ ಕಳುಹಿಸಿ ಮುಜುಗರ ತರುತ್ತೀಯಾ? ನನ್ನನ್ನು ದುಡ್ಡು ಕೊಟ್ಟು ಸಾಕುತ್ತಿಯಾ? ನನ್ನ ರೇಟ್ ಕೇಳುತ್ತಿಯಾ? ಸೂ… ಮಗನೆ? ನಿನ್ನ ಮುಗಿಸಲು ಕಾಯುತ್ತಿದ್ದೆ ಎಂದು ರೇಗಿ, ಧರಿಸಿದ್ದ ಚಪ್ಪಲಿ ತೆಗೆದುಕೊಂಡು ರೇಣುಕಾಸ್ವಾಮಿ ಮೇಲೆ ಪವಿತ್ರಾಗೌಡ ಹಲ್ಲೆ ಮಾಡಿದ್ದಾರೆ. ನಂತರ ಅದೇ ಚಪ್ಪಲಿ ತೆಗೆದುಕೊಂಡು ದರ್ಶನ್ ಅವರೂ ಹೊಡೆದಿದ್ದಾರೆ. ಬಳಿಕ ಕಾಲಿಗೆ ಬೀಳಿಸಿ, ರೇಣುಕಾಸ್ವಾಮಿಯಿಂದ ಕ್ಷಮೆ ಕೇಳಿಸಿದ್ದಾರೆ ಎಂದು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.