ಬೆಂಗಳೂರು: ಉದ್ಯೋಗದಾತ ಸಂಸ್ಥೆಯು ತನ್ನ ಸಿಬ್ಬಂದಿಗೆ ಪಾವತಿಸಬೇಕಾದ ಭವಿಷ್ಯನಿಧಿ ಮೊತ್ತವನ್ನು ಸಿಬ್ಬಂದಿಯ ವೇತನದೊಂದಿಗೆ ಸೇರಿಸಿ ಪಾವತಿಸಿದಲ್ಲಿ ಅದು ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ದಾಸರಹಳ್ಳಿ ಶಾಸಕ ಮುನಿರಾಜು ಅವರ ಮಗಳು ಸ್ವಪ್ನ ಅವರು ಕಾರ್ಯದರ್ಶಿಯಾಗಿರುವ ಶ್ರೀಬಾಲಾಜಿ ಚಾರಿಟೇಬಲ್ ಟ್ರಸ್ಟ್ ಮತ್ತು ಸಂಸ್ಥಾಪಕ ಟ್ರಸ್ಟಿ ಬಿ.ಆರ್. ರಮೇಶ್ ವಿರುದ್ಧ ದಾಖಲಾಗಿದ್ದ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ. ಅಲ್ಲದೆ, ಸಿಬ್ಬಂದಿಯ ವೇತನದಿಂದ ಭವಿಷ್ಯ ನಿಧಿ ಮೊತ್ತವನ್ನು ಕಡಿತಗೊಳಿಸಿ ಭವಿಷ್ಯ ನಿಧಿ ಸಂಸ್ಥೆಗೆ ಪಾವತಿ ಮಾಡದಿದ್ದಲ್ಲಿ ಅಪರಾಧವಾಗಲಿದೆ ಎಂದು ತಿಳಿಸಿದೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರ ಸಿಬ್ಬಂದಿಯ ಭವಿಷ್ಯ ನಿಧಿ ಮೊತ್ತವನ್ನು ಸಿಬ್ಬಂದಿ ವೇತನದಲ್ಲಿ ಪಾವತಿಸಿದ್ದು, ಯಾವುದೇ ಮೊತ್ತವನ್ನು ತಮ್ಮಲ್ಲಿ ಉಳಿಸಿಕೊಂಡಿಲ್ಲ. ಅದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧ ನಂಬಿಕೆ ದ್ರೋಹದ ಆರೋಪದಲ್ಲಿ ವಿಚಾರಣೆಗೆ ಒಳಪಡಿಸಲು ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.
ಆದರೂ, ಸಿಬ್ಬಂದಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ದಂಡವಾಗಿ ಪಾವತಿ ಮಾಡಲಾಗಿದೆ. ದಾಖಲೆಗಳ ಪ್ರಕಾರ ಎಲ್ಲ ಮೊತ್ತ ಪಾವತಿಸಿದ ಬಳಿಕ ತನಿಖೆ ಮುಂದುವರೆಯುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.