ರಾಜ್ಯಪಾಲರ ವಿರುದ್ಧ ರೂಪುಗೊಳ್ಳುತ್ತಿದೆ ಜನಾಂದೋಲನ

ಬರಹ : ಎಂ.ಸಿದ್ದರಾಜು, ಬೆಂಗಳೂರು

ಕರ್ನಾಟಕ ರಾಜ್ಯ ಈಗ ಗವರ್ನರ್ ಮತ್ತು ಸರ್ಕಾರದ ನಡುವಿನ ರಾಜಕೀಯ, ಆಡಳಿತಾತ್ಮಕ ಸಂಘರ್ಷಕ್ಕೆ ವೇದಿಕೆ ಯಾಗಿದೆ. ಆರಂಭದಲ್ಲಿ ರಾಜಕೀಯ ಸಂಘರ್ಷ ಎಂದೇ ಬಿಂಬಿತವಾಗಿದ್ದ ವಿಷಯ ಈಗ ಜನಾಂದೋಲನ ರೂಪ ಪಡೆಯುವ ಎಲ್ಲಾ ಸಂಕೇತಗಳನ್ನು ಸೂಚಿಸುತ್ತಿದೆ.

ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಹಾಗೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಡುವಿನ ರಾಜಕೀಯ ಸಮರ, ಕಾಂಗ್ರೆಸ್ ಪಕ್ಷ ಹಾಗೂ ರಾಜಭವನದ ನಡುವೆ ತಿಕ್ಷಣ ಸ್ವರೂಪ ಪಡೆಯುತ್ತಿದೆ. ಈ ರಾಜಕೀಯ ಕಳಗ ನ್ಯಾಯಾಲಯದ ಅಂಗಳ ಸಹ ತಲುಪಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ ಹದಿನಾಲ್ಕು ನಿವೇಶನ ಗಳ ಹಂಚಿಕೆ ಪಡೆದದ್ದಾರೆ. ಈ ಹಂಚಿಕೆಯಲ್ಲಿ ಮುಖ್ಯ ಮಂತ್ರಿಗಳ ಕೈವಾಡವಿದೆ. ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಂಡ ಕಾರಣ ಅವರ ವಿರುದ್ಧ ತನಿಖೆಗೆ ಮತ್ತು ಅವರನ್ನು ಶಿಕ್ಷೆಗೆ ಒಳಪಡಿಸಲು ಅನುಮತಿ ನೀಡಿ ಎಂದು ಮೂವರು ಸಲ್ಲಿಸಿದ ದೂರನ್ನು ಸ್ವೀಕರಿಸಿದ ರಾಜ್ಯಪಾಲರು ಸಿದ್ದರಾಮಯ್ಯನವರ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ವಿಷಯ ಈಗ ಹಾದಿ ಬೀದಿ ರಂಪವಾಗಿದೆ. ಸಿದ್ದರಾಮಯ್ಯ ಸರ್ಕಾರ ರಾಜ್ಯಪಾಲರ ವಿರುದ್ಧ ಬೀದಿಗೆ ಇಳಿದು ಹೋರಾಟ ಮಾಡುತ್ತಿದೆ.

ರಾಜ್ಯಪಾಲರು ತರಾತುರಿಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಪ್ರಾಷಿಕೂಷನ್ಗೆ ಅನುಮತಿ ನೀಡಿದ್ದಾರೆ. ವರನ್ನು ರಾಜ್ಯಪಾಲರಾಗಿ ನೇಮಿಸಿದ ಬಿಜೆಪಿ ಪಕ್ಷದ ಅಣತಿಯಂತೆ ಕಾರ್ಯನಿರ್ವಹಿಸಿದ್ದಾರೆ. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ರಾಜಭವನವನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ನಾಯಕರು ಆಪಾದಿಸುತ್ತಿದ್ದಾರೆ. ಈ ಆಪಾದನೆಗಳನ್ನು ಸಾರಾಸಗಟಾಗಿ ತಳ್ಳಿ ಹಾಕುವ ಹಾಗಿಲ್ಲಾ ಎಂಬ ಭಾವನೆ ಮೂಡುವಂತಿದೆ ನಡೆದಿರುವ, ನಡೆಯುತ್ತಿರುವ ಘಟನಾವಳಿಗಳು.

 ಸಿದ್ದರಾಮಯ್ಯನವರು ಸೇರಿದಂತೆ ಕಾಂಗ್ರೆಸ್ ಸರ್ಕಾರದ ಸಚಿವರು, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ರಾಜ್ಯಪಾಲರ ನಡೆಯ ವಿರುದ್ಧ ಧರಣಿ ಮಾಡಿದ್ದಾರೆ. ರಾಜಭವನ ಚಲೋ ಸಹ ಮಾಡಿದ್ದಾರೆ. ಕಾಂಗ್ರೆಸ್ನ ಕಾರ್ಯಕರ್ತರೊಬ್ಬರು ಇದೇ ವಿಷಯವನ್ನು ರಾಷ್ಟ್ರಪತಿಯವರಿಗೂ ದೂರು ನೀಡಿದ್ದಾರೆ. ರಾಷ್ಟಪತಿ ದ್ರೌಪದಿ ಮುರ್ಮು ರವರು ಈ ಸಂಬಂಧ ಕರ್ನಾಟಕದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಮಾಧ್ಯಮದಲ್ಲಿ ಬಂದಿದೆ.

ಹಾಗಾದರೆ ಇಲ್ಲೊಂದು ಪ್ರಶ್ನೆ ಕೆಲವರನ್ನು ಕಾಡುತ್ತಿರಬಹುದು. ಮುಖ್ಯಮಂತ್ರಿ ವಿರುದ್ಧ ದೂರು ನೀಡಬಾರದೆ? ಮುಖ್ಯ ಮಂತ್ರಿಗಳು ಕರ್ತವ್ಯಲೋಪ ಎಸಗಿದ್ದರೆ, ಕಾನೂನು ಬಾಹಿರವಾಗಿ ನಡೆದುಕೊಂಡಿದ್ದರೆ ಅವರ ವಿರುದ್ಧ ತನಿಖೆ ಆಗಬಾರದೆ? ಮುಖ್ಯಮಂತ್ರಿ , ಸಚಿವರು, ರಾಜ್ಯಪಾಲರು ಕಾನೂನಿಗೆ ಅತೀತರೆ? ಖಂಡಿತ ಇಲ್ಲ. ಆದರೆ ರಾಜ್ಯಪಾಲರು ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡರೆ, ಒಬ್ಬ ವ್ಯಕ್ತಿ ಅಥವಾ ಸರ್ಕಾರವನ್ನು ಗುರಿಯಾಗಿಸಿಟ್ಟುಕೊಂಡು ನಿರ್ಣಯ ತೆಗೆದುಕೊಂಡರೆ ಅದು ನಿಷ್ಪಕ್ಷಪಾತ ನಿರ್ಣಯ ಆಗಲಾರದು. ಈಗ ಉದ್ಭವವಾಗಿರುವ ಸಂಘರ್ಷಕ್ಕೂ ಇದೇ ಕಾರಣ ಅನಿಸುತ್ತದೆ. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ಆರೋಪ, ರಾಜ್ಯಪಾಲರು ಕೇಂದ್ರ ಸರ್ಕಾರದ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಪತನಗೊಳಿಸುವ ಸಂಚು ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ದೂರು ಬಂದ ಮರು ಕ್ಷಣವೆ, ರಾಜ್ಯಪಾಲರು ಕಾರ್ಯೋನ್ಮುಖರಾಗಿ,  ಮುಖ್ಯಮಂತ್ರಿಗೆ ವಿವರಣೆ ಕೇಳಿ ನೋಟಿಸ್ ನೀಡಿದ್ದಾರೆ. ಬಿಜೆಪಿ ಪಕ್ಷದ ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ ಮತ್ತು  ಶಶಿಕಲಾ ಜೊಲ್ಲೆ ವಿರುದ್ದವೂ ದೂರುಗಳಿವೆ. ಅವರ ವಿರಧ್ದವೂ ಪ್ರಾಸಿಕ್ಯೂಷನ್ಗೆ ಅನುಮತಿ  ಕೋರಿದ ಮನವಿಗಳು ರಾಜಭವನ ದಲ್ಲಿ ಬಾಕಿ ಇವೆ. ಬಿಜೆಪಿ ಮೈತ್ರಿ ಪಕ್ಷದ ಪಾಲುದಾರ ಜೆಡಿಎಸ್ ಸಂಸದ, ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಸಹ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಲೋಕಾಯುಕ್ತ ಪೋಲಿಸರು ಸಲ್ಲಿಸಿರುವ ಮನವಿಯನ್ನು ರಾಜ್ಯಪಾಲರು ಹತ್ತು ತಿಂಗಳು ಕಳೆದರೂ ಕ್ರಮ ತೆಗೆದುಕೊಳ್ಳುವ ಗೋಜಿಗೆ ಹೋಗಿಲ್ಲ. ಇಂತಹ ತಾರತಮ್ಯ ಏಕೆ?  ಈ ಪ್ರಶ್ನೆಗಳಿಗೆ ಉತ್ತರಿಸಲು ರಾಜಭವನ ಉತ್ತರಿಸುವ ಅಗತ್ಯವಿದೆ ಅನಿಸದೆ ಇರದು. Principle of natural justice and fair play ಅನುಗುಣವಾಗಿ ಇದು ಆಗಬೇಕಲ್ಲವೇ?

 ನಿನ್ನೆ ಸರ್ಕಾರದ ಸಚಿವರ ನಿಯೋಗ ರಾಜಭವನ ಚಲೋ ಕಾರ್ಯಕ್ರಮದ ನಂತರ ರಾಜ್ಯಪಾಲರನ್ನು ಭೇಟಿ ಮಾಡಿ, ಮಾಜಿ ಸಚಿವರ ವಿರುದ್ಧ ಬಾಕಿ ಇರುವ ದೂರುಗಳ ಬಗ್ಗೆ ಪ್ರಾಷಿಕೂಷನ್ಗೆ ಅನುಮತಿ ನೀಡಿ ಎಂದು ಮನವಿ ಸಲ್ಲಿಸಿದಾಗ, ಗೆಹಲೋತ್ ರವರು ನನ್ನ ಕಛೇರಿಯಲ್ಲಿ ಯಾವುದೇ ಕಡತ ಬಾಕಿ ಇಲ್ಲ ಎಂದು ತಿಳಿಸಿರುತ್ತಾರೆ. ಹಾಗಾದರೆ ಕುಮಾರಸ್ವಾಮಿ, ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ವಿರುಧ್ಧ ತನಿಖೆ ನಡೆದಿಲ್ಲವೇ? ಆ ಕಡತಗಳು ಮಾಯವಾಗಿಯೆವೇ? ಮಾಹಿತಿ ಇಲ್ಲದೆ ಸರ್ಕಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆಯೇ? ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಸಿದ್ದರಾಮಯ್ಯ ಈಗಾಗಲೆ ರಾಜ್ಯ ಉಚ್ಛ ನ್ಯಾಯಾಲಯದ ಕದ ತಟ್ಟಿದ್ದಾರೆ. ನ್ಯಾಯಾಲಯ ಈಗಾಗಲೆ ವಿಚಾರಣೆ ಆರಂಭಿಸಿದೆ. ಸೋಮವಾರ ವಾದ ಪ್ರತಿ ವಾದಗಳು ಮುಗಿಯಬೇಕು ಎಂದು ನ್ಯಾಯಮೂರ್ತಿ ಯವರು ತಾಖೀತು ಮಾಡಿದ್ದಾರೆ. ನ್ಯಾಯಾಲಯದ ತೀರ್ಪಿಗಾಗಿ ಕಾಯಬೇಕಿದೆ.

ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ನಂತರದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ಹೈಕಮಾಂಡ್ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರವೇ ಮುಖ್ಯ ಮಂತ್ರಿಗಳ ಹಿಂದೆ ನಿಂತಿದೆ. ಇದು ತುಂಬಾ ಒಳ್ಳೆಯ ಬೆಳವಣಿಗೆ.  ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡುವುದರ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಹೋರಾಟ ಮಾಡಲು ನಿರ್ಧರಿಸಿದೆ. ಇದೂ ಸಹ ಉತ್ತಮ ಬೆಳವಣಿಗೆ. ಈಗಾಗಲೆ ರಾಜ್ಯಪಾಲರ ನಡೆಯ ವಿರುದ್ಧ ಕೇರಳ, ತಮಿಳುನಾಡು ಸರ್ಕಾರಗಳು ಕೋರ್ಟ್ ಮೆಟ್ಟಿಲೇರಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಹ ತಮ್ಮ ರಾಜ್ಯದ ರಾಜ್ಯಪಾಲರ ವಿರುದ್ಧ ಸಮರ ಸಾರಿದ್ದಾರೆ. ಇನ್ನು ಕರ್ನಾಟಕ ಸಹ ಈ ಸಾಲಿಗೆ ಸೇರಿದೆ.

 ಕರ್ನಾಟಕದಲ್ಲಿ ರಾಜ್ಯಪಾಲರ ವಿರುದ್ಧ ನಡೆದಿರುವ ಪ್ರತಿಭಟನೆಗಳು ಸರ್ಕಾರ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಸೀಮೀತವಾಗಿಲ್ಲ. ಅದು ಜನಾಂದೋಲನದ ಸ್ವರೂಪ ಪಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಸಿದ್ದರಾಮಯ್ಯ ಜನ ಬೆಂಬಲ ಗಳಿಸಿರುವ ನಾಯಕ. ಅಹಿಂದ ವರ್ಗದ ಆಶಾಕಿರಣ ಎಂದೆ ಬಿಂಬಿತ. ಶೋಷಿತ ವರ್ಗಗಳ ಒಕ್ಕೂಟ ಈಗಾಗಲೆ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡಿದೆ. ಕೆಲವು ಚಿಂತಕರು, ರಾಜಭವನದ ದುರ್ಬಳಕೆ ವಿರುದ್ಧ ರಾಷ್ಟ್ರವ್ಯಾಪಿ ಹೋರಾಟಕ್ಕೆ ಕರೆ ನೀಡಿದ್ದಾರೆ.

 ಬಹುಶಃ ಅಹಿಂದ ಸಮುದಯಕ್ಕೆ ಸಿದ್ದರಾಮಯ್ಯನವರ ಅಗತ್ಯ ಅವರನ್ನು ಬೆಂಬಲಿಸುವ ಅನಿವಾರ್ಯತೆಯ ಅರಿವಾಗಿರಬೇಕು. ಇಂದಿನ ಜಾತಿ ರಾಜಕಾರಣದ ಹೊತ್ತಿನಲ್ಲಿ ಇದು ತುಂಬಾ ಅನಿವಾರ್ಯ. ಹಿಂದುಳಿದ ವರ್ಗದ ನಾಯಕರು ಉನ್ನತ ಸ್ಥಾನ ಅಲಂಕರಿಸಿದರೆ, ಅವರಿಗೆ ಕಿರುಕುಳ ತಪ್ಪದು. ಅಹಿಂದ ವರ್ಗದ ಆರಾಧ್ಯದೈವ ದೇವರಾಜ್ ಅರಸರೂ ಸಹ ಇಂತಹ ಕಿರುಕುಳ ಅನುಭವಿಸಿದ್ದರು. ಇನ್ನು ಮಾಧ್ಯಮಗಳಿಗೆ ಅಹಿಂದ ವರ್ಗದ ನಾಯಕರೆಂದೆ ಒಂದು ರೀತಿಯ ಅಲರ್ಜಿ. ವೀರಪ್ಪ ಮೊಯ್ಲಿ, ಬಂಗಾರಪ್ಪ, ಧರಂಸಿಂಗ್ ಎಲ್ಲರಿಗೂ ಕಿರುಕುಳ ನೀಡಿದ ಉದಾಹರಣೆ ಇದೆ. ಪ್ರಸ್ತುತ ಸನ್ನಿವೇಶದಲ್ಲಿ ಅಹಿಂದ ವರ್ಗದ ಜನರಿಗೆ ಇರುವ ಏಕೈಕ ನಾಯಕ ಎಂದರೆ ಅದು ಸಿದ್ದರಾಮಯ್ಯ ಮಾತ್ರ. ಸಿದ್ದರಾಮಯ್ಯನವರ ಹೆಜ್ಜೆಯನ್ನು ಅನುಸರಿಸುವ ಮತ್ತೊಬ್ಬ ನಾಯಕನ ಉದಯವಾಗಬೇಕಿದೆ. ಇಂದು ಸಿದ್ದರಾಮಯ್ಯ ನವರ ಹಣಿಯಲು ರೂಪಿತವಾಗಿರುವ ಸಂಚನ್ನು ವಿಫಲ ಗೊಳಿಸದಿದ್ದರೆ, ಭವಿಷ್ಯದಲ್ಲಿ ಅಹಿಂದ ನಾಯಕರು ಉಧ್ಬವವಾಗಲಾರರು. ಈ ಕಾರಣಕ್ಕಾಗಿಯಾದರೂ ಸಿದ್ದರಾಮಯ್ಯನವರನ್ನು ಜನತೆ ಬೆಂಬಲಿಸಬೇಕಿದೆ.

 ದೇವರಾಜ್ ಅರಸ್ರನ್ನು ಕಳೆದುಕೊಂಡು ಪರಿತಪಿಸುವ ಸ್ಥಿತಿ ಮರುಕಳಿಸುವ ಮೊದಲು ಎತ್ತೆಚ್ಚುಕೊಳ್ಳುವ ಕಾಲ ಬಂದಿದೆ. ಸಿದ್ದರಾಮಯ್ಯನವರು ಯಾ ಅವರ ಕುಟುಂಬ ಅಕ್ರಮವಾಗಿ ಮೂಡಾ ದಿಂದ ನಿವೇಶನ ಪಡೆದಿದ್ದರೆ, ಕಾನೂನಿನ ಪ್ರಕಾರ ಕ್ರಮವಾಗಲಿ. ಆದರೆ, ಆ ವಿಚಾರವನ್ನು ಪ್ರಧಾನವಾಗಿಸಿ, ಅವರನ್ನು ರಾಜಕೀಯವಾಗಿ ಮುಗಿಸುವ ಕೆಲವರ ಸಂಚು ಗೆಲ್ಲಬಾರದು. ಸಿದ್ದರಾಮಯ್ಯ ಈ ಹಿಂದೆ ಯಾವ ಪಕ್ಷಕ್ಕೆ ಬಲ ನೀಡಿದ್ದರೂ, ಆ ಬಲದಿಂದಲೇ ಇಂದೂ ಸಹ ಅಸ್ಥಿತ್ವದಲ್ಲಿರುವ ಪಕ್ಷದ ಕೆಲವರು ಇಂದು ಸಿದ್ದರಾಮಯ್ಯ ನವರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದು, ಅಪಾರ ಜನ ಮನ್ನಣೆ ಗಳಿಸಿರುವುದು, ಅವರಿಗೆ ಸಹಿಸಲಾಸಾಧ್ಯವಾಗಿದೆ.

ರಾಜಭವನದ ದುರ್ಬಳಕೆ ವಿರುದ್ಧದ ರಾಷ್ಟವ್ಯಾಪಿ ಹೋರಾಟಕ್ಕೆ ಜಯ ಸಿಗುವುದೋ, ಇಲ್ಲವೋ ಕಾದು ನೋಡಬೇಕು. ಕರ್ನಾಟಕದಿಂದ ಆರಂಭವಾದ ಈ ಹೋರಾಟ, ರಾಜಭವನದ ದುರುಪಯೋಗ ಕೊನೆಗಾಣಿಸಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *