ಭಾರತ – ಕೆನಡಾ ಬಾಂಧವ್ಯಕ್ಕುಂಟಾದ ಹಾನಿಗೆ ಪ್ರಧಾನಿ ಟ್ರುಡೊ ನೇರ ಹೊಣೆ: ಭಾರತ

damage to India-Canada ties

ನವದೆಹಲಿ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ತನಿಖಾ ಆಯೋಗದ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಪ್ರಾಥಮಿಕವಾಗಿ ಇದು ಗುಪ್ತಚರ ಮಾಹಿತಿಯಾಗಿದೆ ಹಾಗೂ ನಮ್ಮ ಬಳಿ ಯಾವುದೇ ಗಟ್ಟಿಯಾದ ಮಾಹಿತಿ ಇಲ್ಲ ಎಂದು ಜಸ್ಟಿನ್ ಟ್ರುಡೋ ಹೇಳಿದ್ದಾರೆ. ನಾವು ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸಿಲ್ಲ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಸರ್ಕಾರಿ ಏಜೆಂಟರ ಕೈವಾಡವಿದೆ ಎಂದು ಗುಪ್ತಚರ ಮಾಹಿತಿಯನ್ನು ಮಾತ್ರವೇ ಆಧರಿಸಿ ಟ್ರುಡೋ ಆರೋಪ ಮಾಡಿದ್ದರು. ಆದರೆ, ಇದಕ್ಕೆ ಬೇಕಾದ “ಸ್ಥಿರ ಹಾಗೂ ಖಚಿತ ಸಾಕ್ಷ್ಯಾಧಾರಗಳಿಲ್ಲ” ಎಂದು ಅವರೇ ಒಪ್ಪಿಕೊಂಡಿದ್ದಾರೆ.

ಕೆನಡಾ ಪ್ರಧಾನಿ ಈ ಹೇಳಿಕೆ ಹೊರ ಬರುತ್ತಿದ್ದಂತೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಗುರುವಾರ ಮುಂಜಾನೆ ಹೇಳಿಕೆ ಬಿಡುಗಡೆ ಮಾಡಿದೆ. ಟ್ರುಡೊ ಅವರ ಈ ಹೇಳಿಕೆ, ನಾವು ಇಂದು ಕೇಳಿರುವುದು ಮತ್ತು ನಾವು ನಿರಂತರವಾಗಿ ಹೇಳುತ್ತಿರುವುದನ್ನು ಮಾತ್ರ ದೃಢಪಡಿಸುತ್ತದೆ. ಕೆನಡಾವು ಭಾರತ ಮತ್ತು ಭಾರತೀಯ ರಾಜತಾಂತ್ರಿಕರ ವಿರುದ್ಧದ ಗಂಭೀರ ಆರೋಪಗಳನ್ನು ಬೆಂಬಲಿಸುವ ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸಿಲ್ಲ ಎಂಬುದನ್ನು ವಿಶ್ವಕ್ಕೆ ದೃಢಪಡಿಸಿದೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಭಾರತ-ಕೆನಡಾ ಸಂಬಂಧಗಳ ಮೇಲೆ ಆಗಿರುವ ಭಾರಿ ನಷ್ಟಕ್ಕೆ ಪ್ರಧಾನ ಮಂತ್ರಿ ಟ್ರುಡೊ ಅವರೇ ಜವಾಬ್ದಾರರಾಗಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.

ಟ್ರುಡೋ ಆರೋಪವೇನು?: ಫೆಡರಲ್ ಚುನಾವಣಾ ಪ್ರಕ್ರಿಯೆಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ಸಾರ್ವಜನಿಕ ವಿಚಾರಣೆಯ ಮೊದಲು ಸಾಕ್ಷ್ಯ ನೀಡಿದ ಟ್ರೂಡೊ, ಭಾರತೀಯ ರಾಜತಾಂತ್ರಿಕರು ನರೇಂದ್ರ ಮೋದಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಕೆನಡಿಯನ್ನರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಮತ್ತು ಅದನ್ನು ಭಾರತ ಸರ್ಕಾರ ಮತ್ತು ಅಪರಾಧ ಸಂಸ್ಥೆಗಳ ಉನ್ನತ ಆಡಳಿತಕ್ಕೆ ಹಾಗೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಂತಹ ಕ್ರಿಮಿನಲ್ ಸಂಸ್ಥೆಗಳಿಗೆ ರವಾನಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕೆನಡಾ ಆರೋಪ ತಳ್ಳಿ ಹಾಕಿದ ಭಾರತ: ಆದರೆ, ಭಾರತ ಕೆನಡಾದ ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ಕೆನಡಾದಲ್ಲಿರುವ ಕ್ರಿಮಿನಲ್ ಗ್ಯಾಂಗ್ಗಳೊಂದಿಗೆ ಭಾರತೀಯ ಏಜೆಂಟರನ್ನು ಸಂಪರ್ಕಿಸಲು ಕೆನಡಾದ ಅಧಿಕಾರಿಗಳು ಮಾಡಿದ ಪ್ರಯತ್ನಗಳನ್ನು ಭಾರತ ಬಲವಾಗಿ ತಿರಸ್ಕರಿಸಿದೆ. ನವದೆಹಲಿಯಲ್ಲಿನ ಅಧಿಕೃತ ಮೂಲಗಳೊಂದಿಗೆ ನಿಜ್ಜರ್ ಪ್ರಕರಣದಲ್ಲಿ ತಾನು ನವದೆಹಲಿಯೊಂದಿಗೆ ಪುರಾವೆಗಳನ್ನು ಹಂಚಿಕೊಂಡಿದ್ದೇನೆ ಎಂಬ ಕೆನಡಾ ಸರ್ಕಾರದ ಸಮರ್ಥನೆಯು ನಿಜವಲ್ಲ ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ.

ತನ್ನ ದೇಶದಲ್ಲಿ ಕೆನಡಾದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ರಹಸ್ಯ ಕಾರ್ಯಾಚರಣೆಗಳನ್ನು ನಡೆಸುವುದು ಸೇರಿದಂತೆ ಭಾರತವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂಬ ಟ್ರುಡೊ ಅವರ ಹಿಂದಿನ ಆರೋಪಗಳನ್ನು ನವದೆಹಲಿಯ ಮೂಲಗಳು ಮತ್ತೊಮ್ಮೆ ತಿರಸ್ಕರಿಸಿವೆ.

Leave a Reply

Your email address will not be published. Required fields are marked *