ಬೆಂಗಳೂರು: ‘ನಾನು ನಂದಿನಿ, ಬೆಂಗಳೂರಿಗೆ ಬಂದೀನಿ’ ಎಂಬ ಹಾಡಿನ ಹಾಸ್ಯಮಯ ವಿಡಿಯೋಗಳ ಮೂಲಕ ಜನಪ್ರಿಯತೆ ಗಳಿಸಿದ್ದ ವಿಡಿಯೋ ಕ್ರಿಯೇಟರ್ ವಿಕ್ಕಿಪೀಡಿಯಾ ವಿಕಾಸ್ ಎಂಬಾತನಿಗೆ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮಾದಕವಸ್ತು ವ್ಯಸನದ ಬಗ್ಗೆ ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ವಿಕಾಸ್‌ನನ್ನು ಬೈಯಪ್ಪನಹಳ್ಳಿ ಪೊಲೀಸರು ಫೋನ್ ಮೂಲಕ ಸಂಪರ್ಕಿಸಿದ್ದಾರೆ.
ಡ್ರಗ್ಸ್ ಬಗೆಗಿನ ಪ್ರಚೋದನಾತ್ಮಕ ಹೇಳಿಕೆಯ ವೀಡಿಯೋ ಕೂಡಲೇ ಡಿಲೀಟ್ ಮಾಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ
ಪೊಲೀಸರ ಎಚ್ಚರಿಕೆ ಹಿನ್ನೆಲೆಯಲ್ಲಿ ವಿಕಾಸ್ ಅವರು ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆನ್ನಲಾಗಿದೆ.
ವಿಕಾಸ್ ಅವರು, ಪ್ರಚಲಿತ ವಿದ್ಯಾಮಾನಗಳು, ರಾಜಕೀಯ ಸೇರಿ ಹಲವು ವಿಷಯಗಳನ್ನು ಆಧರಿಸಿ ಹಾಸ್ಯ, ವಿಡಂಬನೆಯ ವಿಡಿಯೋಗಳನ್ನು ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಅದರಂತೆ ಹಾಸ್ಯ ವಿಡಿಯೋವೊಂದರಲ್ಲಿ ಮಾದಕ ಕುರಿತು ಮಾತನಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ, ಕ್ರಮಕ್ಕೆ ಆಗ್ರಹಿಸಿದ್ದರು.