ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಮುಖ ಆತಂಕ
ಹುಬ್ಬಳ್ಳಿ: ಕಳೆದ ಫೆಬ್ರವರಿ ತಿಂಗಳ ವೇತನ ಇನ್ನೂ ಪಾವತಿ ಆಗದ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಪರದಾಟ ನಡೆಸಬೇಕಾದ ಪ್ರಸಂಗ ಉದ್ಭವಿಸಿದೆ. ತಿಂಗಳ ಆರಂಭದಲ್ಲಿಯೇ ಜಮೆ ಆಗುತ್ತಿದ್ದ ವೇತನ ಇಲ್ಲಿಯವರೆಗೂ ಜಮೆ ಆಗಿಲ್ಲ. ಹೀಗಾಗಿ ಸಾವಿರಾರು ಮಂದಿ ಪೊಲೀಸ್ ಸಿಬ್ಬಂದಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಳ ವಿಳಂಬದಿಂದ ಮನೆ ಬಾಡಿಗೆ, ಬ್ಯಾಂಕ್ ಸಾಲದ ಕಂತುಗಳು, ಮಕ್ಕಳ ಶಿಕ್ಷಣ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಮತ್ತು ಎಸ್‌ಪಿ ವ್ಯಾಪ್ತಿಯಲ್ಲಿರುವ 3,200 ಸಿಬ್ಬಂದಿಗೂ ಇನ್ನೂ ವೇತನ ಬಂದಿಲ್ಲ ಎನ್ನಲಾಗಿದೆ.
ಪೊಲೀಸ್ ಸಿಬ್ಬಂದಿಗೆ ಸರ್ಕಾರ ಇನ್ನೂ ವೇತನ ಪಾವತಿಸದಿರುವ ವಿಚಾರವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿ ಕಾರಿದ್ದಾರೆ. ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಅವರು, ಈ ಬಾರಿ 4.48 ಲಕ್ಷ ಕೋಟಿ ರೂ ಗಾತ್ರದ ಅತಿ ದೊಡ್ಡ ಬಜೆಟ್ ಮಂಡಿಸಿ ರಾಜ್ಯದ ಆರ್ಥಿಕತೆ ಸದೃಢವಾಗಿದೆ ಎನ್ನುವ ಮರೀಚಿಕೆಯಲ್ಲಿ ವಿಹರಿಸುತ್ತಿದ್ದೀರಿ.
ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ವಿಜಯನಗರ, ಕಲಬುರ್ಗಿ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಾವಿರಾರು ಪೊಲೀಸರು ಸಂಬಳವಿಲ್ಲದೆ ಕಂಗಾಲಾಗಿದ್ದಾರೆ. ಸುಳ್ಳು ಪ್ರಚಾರಕ್ಕೆ ಕೋಟಿ ಕೋಟಿ ಸುರಿಯುವ ಈ ಕಾಂಗ್ರೆಸ್ ಸರ್ಕಾರಕ್ಕೆ, ಹಗಲಿರುಳು ಶ್ರಮಿಸುವ ನಮ್ಮ ರಕ್ಷಕರಿಗೆ ವೇತನ ನೀಡಲು ಹಣವಿಲ್ಲ. ಇದು ಕೇವಲ ತಾಂತ್ರಿಕ ವಿಳಂಬವಲ್ಲ, ರಾಜ್ಯದ ಆರ್ಥಿಕ ದಿವಾಳಿತನದ ಮತ್ತೊಂದು ಸಾಕ್ಷಿ. ಒಂದು ಕಡೆ ದಾಖಲೆ ಮೊತ್ತದ ಬಜೆಟ್ ಘೋಷಣೆ, ಮತ್ತೊಂದು ಕಡೆ ಸಂಬಳಕ್ಕಾಗಿ ಪೊಲೀಸರ ಪರದಾಟ . ಈ ವೈರುಧ್ಯವೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ. ಬಜೆಟ್ ನಲ್ಲಿ ಅಂಕಿ-ಅಂಶಗಳ ಮೂಲಕ ಜನರನ್ನು ಮರಳು ಮಾಡುವ ನಿಮ್ಮ ಅನಗತ್ಯ, ಅವಾಸ್ತವಿಕ ಸರ್ಕಸ್ ಬಯಲಾಗಿದೆ. ಕಾಗದದ ಮೇಲಿನ ಘೋಷಿತ ಅಂಕಿ-ಅಂಶಗಳಿಗಿಂತ, ಜನರ ಸ್ವಾಭಿಮಾನದ ಬದುಕು ಮುಖ್ಯ. ನಿಮ್ಮ ವೈಫಲ್ಯಗಳಿಗೆ ಕಾರಣ ಏನೇ ಇರಲಿ, ಈ ಕೂಡಲೇ ರಾಜ್ಯದ ಪೊಲೀಸ್ ಸಿಬ್ಬಂದಿಯ ಬಾಕಿ ವೇತನ ಬಿಡುಗಡೆ ಮಾಡಿ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.
For More Updates Join our WhatsApp Group :




