ನವದೆಹಲಿ: ಅಧಿಕಾರ ದುರ್ಬಳಕೆ ಸೇರಿದಂತೆ ವಿವಿಧ ವಿವಾದಗಳಿಂದ ದೇಶಾದ್ಯಂತ ಸುದ್ದಿಯಾಗಿದ್ದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾತ್ಕಾಲಿಕ ಅಭ್ಯರ್ಥಿತನವನ್ನು ರದ್ದುಗೊಳಿಸಲಾಗಿದ್ದು, ಮುಂದಿನ ಎಲ್ಲಾ ಪರೀಕ್ಷೆಗಳು ಅಥವಾ ಆಯ್ಕೆಯಿಂದ ಅವರನ್ನು ನಿರ್ಬಂಧಿಸಲಾಗಿದೆ ಎಂದು ಕೇಂದ್ರ ಲೋಕಸಭಾ ಆಯೋಗ- ಯುಪಿಎಸ್ ಸಿ ಬುಧವಾರ ಹೇಳಿದೆ.
ಲಭ್ಯವಿರುವ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದು, ಅವರು ಸಿಇಸಿ-2022 ನಿಯಮಗಳ ನಿಬಂಧನೆಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಕಂಡುಹಿಡಿದಿದೆ ಎಂದು ಯುಪಿಎಸ್ ಸಿ ಹೇಳಿಕೆಯಲ್ಲಿ ತಿಳಿಸಿದೆ. ನಾಗರಿಕ ಸೇವಾ ಪರೀಕ್ಷೆ -2002 ಗಾಗಿ ಪೂಜಾ ಖೇಡ್ಕರ್ ಅವರ ತಾತ್ಕಾಲಿಕ ಉಮೇದುವಾರಿಕೆಯನ್ನು ರದ್ದುಗೊಳಿಸಲಾಗಿದ್ದು, ಭವಿಷ್ಯದ ಎಲ್ಲಾ UPSC ಪರೀಕ್ಷೆಗಳು ಅಥವಾ ಆಯ್ಕೆಗಳಿಂದ ಶಾಶ್ವತವಾಗಿ ಡಿಬಾರ್ ಮಾಡಲಾಗಿದೆ ಎಂದು ಹೇಳಿದೆ.
ಸುಳ್ಳು ಗುರುತಿನ ಮೂಲಕ ಪರೀಕ್ಷೆ ಬರೆಯಲು ಅನುಮತಿಸುವ ಮಿತಿಯನ್ನು ಮೀರಿ ಮೋಸ ಮಾಡಿದ ಯತ್ನಕ್ಕಾಗಿ ಜುಲೈ 18 ರಂದು ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಅವರು ಜುಲೈ 25 ರೊಳಗೆ ಶೋಕಾಸ್ ನೋಟಿಸ್ ಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಬೇಕಾಗಿತ್ತು ಆದರೆ ಅವರು ತಮ್ಮ ಪ್ರತಿಕ್ರಿಯೆಗಾಗಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲು ಆಗಸ್ಟ್ 4 ರವರೆಗೆ ಸಮಯವನ್ನು ಕೋರಿದರು ಎಂದು ಆಯೋಗ ತಿಳಿಸಿದೆ.