ಪ್ರಜಾಪ್ರಗತಿ ಪತ್ರಿಕೆಯ ವರದಿ ವಿಧಾನ ಪರಿಷತ್ತಿನಲ್ಲಿ ಚರ್ಚೆ.

ಪ್ರಜಾಪ್ರಗತಿ ಪತ್ರಿಕೆಯ ವರದಿ ವಿಧಾನ ಪರಿಷತ್ತಿನಲ್ಲಿ ಚರ್ಚೆ.

ಪ್ರಜಾಪ್ರಗತಿ ವರದಿ: ಸಾಂತ್ವನ ಕೇಂದ್ರಗಳ ಸ್ಥಗಿತಕ್ಕೆ ವಿವಾದ

ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇಡೀ ನಾಡು ಸಂಭ್ರಮದಿಂದ ಆಚರಿಸುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ರಾಜ್ಯದ ಮಹಿಳೆಯರ ಪಾಲಿಗೆ ಆತಂಕಕಾರಿ ಸುದ್ದಿಯೊಂದು ‘ಪ್ರಜಾಪ್ರಗತಿ’ ಪತ್ರಿಕೆಯಲ್ಲಿ ದಿನಾಂಕ 08.03.2026 ರಂದು ವರದಿಯಾಗಿರುತ್ತದೆ. ಸರ್ಕಾರ ಜಿಲ್ಲಾ ಸಾಂತ್ವನ ಕೇಂದ್ರಗಳ ಸ್ಥಗಿತಗೊಳಿಸಲು ಮುಂದಾಗಿರುವ ವಿಷಯವನ್ನು ಶೂನ್ಯವೇಳೆಯಲ್ಲಿ  ವಿಧಾನ ಪರಿಷತ್ತಿನ  ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು ಪ್ರಸ್ತಾಪಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಆಸರೆಯಾಗಿದ್ದ ‘ಸಾಂತ್ವನ ಕೇಂದ್ರ’ಗಳನ್ನು 2026-27ನೇ ಸಾಲಿನಿಂದ ಸ್ಥಗಿತಗೊಳಿಸಲು ಸರ್ಕಾರ ಸುತ್ತೋಲೆ ಹೊರಡಿಸಿದ ಎಂಬ ಆಘಾತಕಾರಿ ವರದಿ ಪತ್ರಿಕೆಯಲ್ಲಿ ಪ್ರಕಟವಾಗಿರುತ್ತದೆ. ಕಳೆದ 25 ವರ್ಷಗಳಿಂದ ಕೌಟುಂಬಿಕ ದೌರ್ಜನ್ಯ, ಮಾನಸಿಕ ಹಿಂಸೆ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ತುತ್ತಾದ ಮಹಿಳೆಯರಿಗೆ ಈ ಕೇಂದ್ರಗಳು ಕಾನೂನು ನೆರವು ಹಾಗೂ ಆಸರೆ ನೀಡುತ್ತಿದ್ದವು. ಈಗ ಇವುಗಳನ್ನು ಮುಚ್ಚುವುದರಿಂದ ಸಾವಿರಾರು ಮಹಿಳೆಯರು ಅನಾಥರಾಗಲಿದ್ದಾರೆ. ಈ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ನೌಕರರು ಮತ್ತು ಸಮಾಜ ಸೇವಕರು ಇದ್ದಕ್ಕಿದ್ದಂತೆ ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳುವ ಭೀತಿಯಲ್ಲಿದ್ದಾರೆ.

ಆದುದರಿಂದ ಜಿಲ್ಲಾ ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲು ಹೊರಡಿಸಿರುವ ಆದೇಶ ಅಥವಾ ಸುತ್ತೋಲೆಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಈ ಕೇಂದ್ರಗಳ ಸುಗಮ ನಿರ್ವಹಣೆಗೆ ಬಜೆಟ್‌ನಲ್ಲಿ ಅಗತ್ಯ ಅನುದಾನವನ್ನು ಮೀಸಲಿಡಬೇಕು. ಕೇಂದ್ರ ಸರ್ಕಾರದ ‘ಸಖಿ’ ಯೋಜನೆಯೊಂದಿಗೆ ರಾಜ್ಯದ ‘ಸಾಂತ್ವನ’ ಕೇಂದ್ರಗಳನ್ನು ವಿಲೀನಗೊಳಿಸುವ ಬದಲು, ಎರಡೂ ಯೋಜನೆಗಳು ಪೂರಕವಾಗಿ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಮಹಿಳಾ ದಿನಾಚರಣೆಯಂದೇ ಇಂತಹ ವರದಿಗಳು ಬಂದಿರುವುದು ರಾಜ್ಯದ ಮಹಿಳೆಯರಲ್ಲಿ ಆತಂಕ ಮೂಡಿಸಿದ್ದು ಮಹಿಳೆಯರ ಸುರಕ್ಷತೆ ಮತ್ತು ಹಕ್ಕುಗಳಿಗೆ ಆಸರೆಯಾಗಿರುವ ಕೇಂದ್ರಗಳನ್ನೇ ಮುಚ್ಚುವುದು ಸರಿಯಲ್ಲ. ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಸಾಂತ್ವನ ಕೇಂದ್ರಗಳು ಮುಂದುವರಿಯುವಂತೆ ಕ್ರಮ ಕೈಗೊಳ್ಳಬೇಕೆಂದು ಶೂನ್ಯವೇಳೆಯಲ್ಲಿ ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರನ್ನು ಒತ್ತಾಯಿಸುತ್ತೇನೆ ಎಂದು ಮನವಿ ಮಾಡಿದರು ತಿಪ್ಪಣ್ಣಪ್ಪ ಕಮಕನೂರ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *