ಬೆಂಗಳೂರು: ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಶುಕ್ರವಾರ ತೀರ್ಪು ನೀಡಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇದೀಗ ಶಿಕ್ಷೆಯ ಪ್ರಮಾಣ ಪ್ರಕಟಿಸಲು ವಾದ-ಪ್ರತಿ ವಾದ ಆಲಿಸಿದೆ. ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಮತ್ತು ಪ್ರಜ್ವಲ್ ಪರ ವಕೀಲರಿಂದ ವಾದ ಆಲಿಸಿದ ನಂತರ ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ ಭಟ್ ಶಿಕ್ಷೆಯ ಪ್ರಮಾಣವನ್ನು ಮಧ್ಯಾಹ್ಹ 2.45ಕ್ಕೆ ಪ್ರಕಟಿಸುವುದಾಗಿ ತಿಳಿಸಿದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿಎನ್ ಜಗದೀಶ್ ಅವರು ವಾದ ಮಂಡನೆ ಮಾಡಿದರೆ, ಪ್ರಜ್ವಲ್ ರೇವಣ್ಣ ಪರವಾಗಿ ಹಿರಿಯ ವಕೀಲೆ ನಳಿನಿ ಮಾಯೇಗೌಡ ವಾದ ಮಂಡಿಸಿದರು.
ಪ್ರಜ್ವಲ್ ಶಿಕ್ಷೆಯ ಪ್ರಮಾಣ: ಬಿಎನ್ ಜಗದೀಶ್ ವಾದವೇನು?
ಜೀವಕ್ಕಿಂತ ಹೆಚ್ಚಿನ ಹಾನಿ ಸಂತ್ರಸ್ತ ಮಹಿಳೆಗಾಗಿದೆ. ಒಪ್ಪಿಗೆಯಿಲ್ಲದೇ ಲೈಂಗಿಕ ಕ್ರಿಯೆಯ ಚಿತ್ರೀಕರಣ ಮಾಡಲಾಗಿದೆ. ಆಕೆಯನ್ನು ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಮಾಡಲಾಗಿದೆ. ಅತ್ಯಾಚಾರದ ರೀತಿಯು ಆತನ ವಕ್ರ ಮನಃಸ್ಥಿತಿ ತೋರಿಸುತ್ತದೆ. ಪ್ರಜ್ವಲ್ ಸಂಸದನಾಗಿದ್ದೂ ಇಂತಹ ದುಷ್ಕೃತ್ಯ ಎಸಗಿದ್ದಾನೆ. ಕಾನೂನು ತಿಳಿದಿದ್ದೂ ಇಂತಹ ನೀಚ ಕೃತ್ಯ ಎಸಗಿದ್ದಾನೆ. ಇದು ಇನ್ನೂ ಗಂಭೀರವಾದ ಅಪರಾಧ. ಈತನ ಮೇಲೆ ಈ ರೀತಿಯ ಇನ್ನಷ್ಟು ಕೇಸ್ಗಳಿವೆ. ಬಹಳಷ್ಟು ಜನರ ಅಶ್ಲೀಲ ವಿಡಿಯೋ ಮಾಡಿದ್ದಾನೆ. ವಿಡಿಯೋ ಚಿತ್ರೀಕರಿಸಿರುವುದು ಗಂಭೀರ ಅಪರಾಧ. ಗರಿಷ್ಠ ಶಿಕ್ಷೆ ವಿಧಿಸಿ, ಇತರರಿಗೆ ಅದು ಎಚ್ಚರಿಕೆಯಾಗುವಂತೆ ನೋಡಿಕೊಳ್ಳಬೇಕು. ಜೀವನಪರ್ಯಂತ ಸೆರೆವಾಸದ ಶಿಕ್ಷೆ ವಿಧಿಸಬೇಕು ಎಂದು ಬಿಎನ್ ಜಗದೀಶ್ ವಾದ ಮಂಡಿಸಿದರು.
ಸಾಕ್ಷ್ಯಾಧಾರ ನಾಶಪಡಿಸಲು ಯತ್ನಿಸಿರುವುದೂ ಗಂಭೀರ ಅಪರಾಧ. ಈತ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ತೋರಿಲ್ಲ. ಈತನಿಗೆ ಕಠಿಣ ಶಿಕ್ಷೆ ಒದಗಿಸಿ ಸಮಾಜಕ್ಕೆ ಸಂದೇಶ ನೀಡಬೇಕು. ಹಣ, ಅಧಿಕಾರವಿರುವ ಇವರಿಗೆ ಕಡಿಮೆ ಶಿಕ್ಷೆಯಾಗಬಾರದು ಎಂದು ಅವರು ವಾದಿಸಿದರು.