ರಾಯಚೂರು: ಭ್ರಾತೃತ್ವದ ಸಂಕೇತವಾದ ರಕ್ಷಾ ಬಂಧನದ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ರಾಯಚೂರಿನ ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿ ಶುಭ ಹಾರೈಸಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಮದ ಐವರು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಇದೇ ವೇಳೆ ವಿದ್ಯಾರ್ಥಿಗಳು ರಾಷ್ಟ್ರಪತಿಗಳಿಂದ ರಾಖಿ ಕಟ್ಟಿಸಿಕೊಂಡು ಸಂತಸಪಟ್ಟಿದ್ದಾರೆ. ಏಕಲವ್ಯ ಮಾದರಿ ವಸತಿ ಶಾಲೆ ವಿದ್ಯಾರ್ಥಿಗಳಾದ ಸುರೇಶ, ಚನ್ನಬಸವ, ಮಂಜುನಾಥ, ಭರತ್ ಮತ್ತು ಮಣಿಕಂಠಗೆ ಮುರ್ಮು ರಾಖಿ ಕಟ್ಟಿದ್ದಾರೆ. ಈ ವೇಳೆ ಶಿಕ್ಷಕ ರವಿಕುಮಾರ್ ವಿದ್ಯಾರ್ಥಿಗಳ ಜೊತೆ ಹಾರಿದ್ದರು.
ಕೊತ್ತದೊಡ್ಡಿ ಏಕಲವ್ಯ ವಸತಿ ಶಾಲೆ ಕೇಂದ್ರ ಬುಡಕಟ್ಟು ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಈ ಹಿನ್ನೆಲೆ, ಬುಡಕಟ್ಟು ಇಲಾಖೆಯ ಶಾಲಾ ಮಕ್ಕಳಿಗೆ ರಾಷ್ಟ್ರಪತಿಗಳು ಆಹ್ವಾನ ನೀಡಿದ್ದರು. ರಾಯಚೂರಿನ ದೇವದುರ್ಗ ಸೇರಿ ರಾಜ್ಯದ ನಾಲ್ಕು ಬುಡಕಟ್ಟು ಶಾಲೆಗಳ ಮಕ್ಕಳಿಗೆ ಆಹ್ವಾನ ನೀಡಲಾಗಿತ್ತು. ರಾಖಿ ಕಟ್ಟಿದ ಬಳಿಕ ರಾಷ್ಟ್ರಪತಿಗಳು ಮಕ್ಕಳಿಗೆ ಶುಭಾಶಯ ತಿಳಿಸಿ ಸಿಹಿ ವಿತರಿಸಿದ್ದಾರೆ.
ರಾಷ್ಟ್ರಪತಿಗಳು ದೇಶದಾದ್ಯಂತ ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಆಹ್ವಾನಿಸುವ ಮೂಲಕ ರಕ್ಷಾ ಬಂಧನವನ್ನು ಆಚರಿಸಿದ್ದಾರೆ. ಸರ್ಕಾರಿ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು, ಜವಾಹರ್ ನವೋದಯ ವಿದ್ಯಾಲಯಗಳು, ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯಗಳು (ಕೆಜಿಬಿವಿಗಳು) ಹಾಗೂ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಶಾಲಾ ಮಕ್ಕಳು ಆಚರಣೆಯಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಕರ್ನಾಟಕದ ನಾಲ್ಕು ಬುಡಕಟ್ಟು ಶಾಲೆಗಳ ಮಕ್ಕಳು ಕೂಡ ಭಾಗವಹಿಸಿದ್ದಾರೆ.
For More Updates Join our WhatsApp Group :