ಬೆಂಗಳೂರು: ಬೆಂಗಳೂರಿಗೆ ಭಾನುವಾರ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ನಮ್ಮ ಮೆಟ್ರೋ ಯೆಲ್ಲೋ ಲೈನ್ ಲೋಕಾರ್ಪಣೆ ಮಾಡಿದ್ದರು. ಮತ್ತೊಂದೆಡೆ ಅದೇ ಸಮಯದಲ್ಲಿ, ಐದು ವರ್ಷ ವಯಸ್ಸಿನ ಪುಟ್ಟ ಬಾಲಕಿಯೊಬ್ಬಳು ಬೆಂಗಳೂರಿನ ಹದಗೆಟ್ಟ ರಸ್ತೆಗಳ ಬಗ್ಗೆ ಹಾಗೂ ಸಂಚಾರದಟ್ಟಣೆ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆದಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬೆಂಗಳೂರಿನ ನಿವಾಸಿ ಅಭಿರೂಪ್ ಎಂಬವರ ಪುತ್ರಿ ಆರ್ಯ, ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು, ನಗರದ ದೀರ್ಘಕಾಲದ ಸಂಚಾರ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾಳೆ. ಈ ಕುರಿತು ಅಭಿರೂಪ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ ಮಾಹಿತಿ ಹಂಚಿಕೊಂಡಿದ್ದಾರೆ.
ಪುಟಾಣಿಯ ಕೈಬರಹದ ಪತ್ರವು ಸಾರ್ವಜನಿಕರ ಗಮನ ಸೆಳೆದಿದ್ದು, ಆನ್‌ಲೈನ್‌ನಲ್ಲಿ ಸಹಾನುಭೂತಿಯ ಅಲೆ ಹೊಮ್ಮಿದೆ.
ಬೆಂಗಳೂರಿನ ಬಾಲಕಿ ಮೋದಿಗೆ ಬರೆದ ಪತ್ರದಲ್ಲೇನಿದೆ?
‘ನರೇಂದ್ರ ಮೋದಿ ಜೀ, ಬೆಂಗಳೂರಿನಲ್ಲಿ ವಿಪರೀತ ಟ್ರಾಫಿಕ್ ಇದ್ದು ನಾವು ಶಾಲೆ ಹಾಗೂ ಕಚೇರಿಗಳಿಗೆ ತಡವಾಗಿ ತಲುಪುತ್ತಿದ್ದೇವೆ. ರಸ್ತೆ ತುಂಬಾ ಕೆಟ್ಟದಾಗಿದೆ. ದಯಮಾಡಿ ಸಹಾಯ ಮಾಡಿ’ ಎಂದು ಮೋದಿಗೆ ಬರೆದ ಪತ್ರದಲ್ಲಿ ಬಾಲಕಿ ಆರ್ಯ ಉಲ್ಲೇಖಿಸಿದ್ದಾಳೆ.
‘ಪ್ರಧಾನಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ನನ್ನ 5 ವರ್ಷದ ಮಗಳು ಇದನ್ನು ಟ್ರಾಫಿಕ್ ಸಮಸ್ಯೆ ಪರಿಹರಿಸುವ ಅವಕಾಶವೆಂದು ಭಾವಿಸಿದ್ದಾಳೆ’ ಎಂದು ಅಭಿರೂಪ್ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಪುಟಾಣಿ ಬಾಲಕಿ ಮೋದಿಗೆ ಬರೆದ ಪತ್ರ
ಪುಟಾಣಿ ಬಾಲಕಿ ಪ್ರಧಾನಿಗೆ ಬರೆದ ಪತ್ರದ ಬಗ್ಗೆ ಅನೇಕರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ‘‘ಅವರು ನಿಮ್ಮ ಮಗಳನ್ನು ಭೇಟಿಯಾಗುತ್ತಾರೆ ಮತ್ತು ಅವರ ಆಸೆ ಈಡೇರುತ್ತದೆ ಎಂದು ನಾನು ಭಾವಿಸುತ್ತೇನೆ’’ ಎಂಬುದಾಗಿ @MayyankK3246 ಹ್ಯಾಂಡಲ್ನ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರ @scmitra ಪ್ರತಿಕ್ರಿಯಿಸಿ, 15 ವರ್ಷಗಳ ಹಿಂದೆ ತಮ್ಮ ಮಗಳು ಮುಂಬೈನಲ್ಲಿ ಶಬ್ದ ಮಾಲಿನ್ಯದ ಬಗ್ಗೆ ರಾಷ್ಟ್ರಪತಿಗಳಿಗೆ ಬರೆದಿದ್ದನ್ನು ಹಾಗೂ ನಂತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ಶಾಲಾ ಆಟದ ಮೈದಾನದ ಕಾಂಪೌಂಡ್ಗಾಗಿ ತುಮಕೂರು ತಾಲೂಕಿನ ಬೆಳೆದರ ಗ್ರಾಮದ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಸಿಮ್ರಾ ಸನೋಬರ್ ಎಂಬಾಕೆ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರವುದನ್ನು ಇಲ್ಲಿ ಸ್ಮರಿಸಬಹುದು.