ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಬಿಂದಾಸ್ ಮೋಜು-ಮಸ್ತಿ! ನಾಲ್ವರು ವಿಚಾರಣಾಧೀನ ಕೈದಿಗಳ ವಿರುದ್ಧ FIR.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಬಿಂದಾಸ್ ಮೋಜು-ಮಸ್ತಿ! ನಾಲ್ವರು ವಿಚಾರಣಾಧೀನ ಕೈದಿಗಳ ವಿರುದ್ಧ FIR.

ಬೆಂಗಳೂರು: ಕಳೆದ ಕೆಲ ದಿನಗಳಿಂದ ಪರಪ್ಪನ ಅಗ್ರಹಾರ  ಜೈಲಿನಲ್ಲಿನ ಕೈದಿಗಳ ಕುರಿತು ಹಲವು ಆರೋಪಗಳು ಕೇಳಿಬಂದಿವೆ.  ಕೈದಿಗಳ ಡ್ಯಾನ್ಸ್ ವೀಡಿಯೋ ಜೊತೆಗೆ  ಜೈಲಿನಲ್ಲಿದ್ದ ಕೈದಿಗಳು ಕೈಯಲ್ಲಿ ಮೊಬೈಲ್ ಹಿಡಿದು, ಐಷಾರಾಮಿ ಜೀವನ ನಡೆಸುತ್ತಿದ್ದ ವೀಡಿಯೋಗಳು ವೈರಲ್ ಆಗಿದ್ದವು. ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಿಸಿದ ವೀಡಿಯೋಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಹಿನ್ನೆಲೆ ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಈ ಎಲ್ಲಾ ಪ್ರಕರಣಗಳ ಕುರಿತು ಎಚ್ಚೆತ್ತ ಗೃಹ ಇಲಾಖೆ ಆಂತರಿಕ ತನಿಖೆಗೆ ಮುಂದಾಗಿದೆ. ಬಂಧಿತರ ವೈರಲ್ ಆದ ಡ್ಯಾನ್ಸ್‌ ವಿಡಿಯೋಗೆ ಸಂಬಂಧ ಪಟ್ಟಂತೆಯೂ ಎಫ್ಐಆರ್‌ ದಾಖಲಾಗಿದೆ.

ರಾಜಾತಿಥ್ಯ ಸಿಕ್ಕ ಕೈದಿಗಳ ವಿಚಾರಣೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ಘಟನೆಗೆ ಸಂಬಂಧಿಸಿದಂತೆ ಆಂತರಿಕ ತನಿಖೆ ಆರಂಭವಾಗಿದೆ. ಮೊಬೈಲ್‌ ಫೋನ್‌ ಬಳಸಿದ್ದ ಆರೋಪದ ಹಿನ್ನೆಲೆಯಲ್ಲಿ ಕೈದಿಗಳಾದ ತರುಣ್ ಕೊಂಡೂರು, ಸೀರಿಯಲ್‌ ಕಿಲ್ಲರ್‌ ಉಮೇಶ್‌ ರೆಡ್ಡಿ ಹಾಗೂ ಜುಹಾದ್‌ ಹಮೀದ್‌ ಶಕೀಲ್‌ರನ್ನು ಜೈಲು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳು ಮೊಬೈಲ್‌ ಬಳಕೆ ಹಾಗೂ ಜೈಲಿನೊಳಗಿನ ಬಿಂದಾಸ್‌ ಜೀವನಶೈಲಿ ಬಗ್ಗೆ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣದ ಕುರಿತು ಆಂತರಿಕ ತನಿಖೆ ಮುಂದುವರಿಸಲಾಗಿದ್ದು, ವರದಿ ಶೀಘ್ರದಲ್ಲೇ ಮೇಲಾಧಿಕಾರಿಗಳಿಗೆ ಸಲ್ಲಿಕೆಯಾಗಲಿದೆ.

ಡ್ಯಾನ್ಸ್‌ ವಿಡಿಯೋಗೆ ಸಂಬಂಧಿಸಿ ಎಫ್ಐಆರ್‌

ಕಾರಾಗೃಹದಲ್ಲಿ ಬಂಧಿತರ ಡ್ಯಾನ್ಸ್‌ ವಿಡಿಯೋ ವೈರಲ್‌ ಹಿನ್ನೆಲೆಯಲ್ಲಿ ನಾಲ್ವರು ವಿಚಾರಣಾಧೀನ ಬಂಧಿಗಳ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಕಾರ್ತಿಕ್, ಧನಂಜಯ, ಮಂಜುನಾಥ್ ಅಲಿಯಾಸ್ ಕೋಳಿ ಮಂಜ ಮತ್ತು ಚರಣ್ ರಾವ್‌ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬ್ಯಾರಕ್‌ 8ರ ಕೊಠಡಿ ಸಂಖ್ಯೆ 7ರಲ್ಲಿ ನಡೆದ ಡ್ಯಾನ್ಸ್‌ನಲ್ಲಿ ನಿಷೇಧಿತ ವಸ್ತುಗಳ ಬಳಕೆಯ ಆರೋಪ ಕೇಳಿ ಬಂದಿತ್ತು.  ಈ ಘಟನೆ 2018 ರಿಂದ 2025ರ ಅವಧಿಯಲ್ಲಿ ನಡೆದಿದ್ದು, ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿದವರು ಹಾಗೂ ಚಿತ್ರೀಕರಣವನ್ನು ಹಂಚಿದವರ ಕುರಿತು ತನಿಖೆ ಆರಂಭವಾಗಿದೆ. ಬಿಎನ್ಎಸ್‌ ಸೆಕ್ಷನ್‌ 42 ಮತ್ತು ಕಾರಾಗೃಹ ಕಾಯ್ದೆ 2022ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *