ಬೆಂಗಳೂರು: ಡ್ರೈವಿಂಗ್ ಲೈಸೆನ್ಸ್ ಗಾಗಿ ಪರೀಕ್ಷೆ ಬರೆದ ಅನೇಕರು ಡಿಎಲ್‌ಗಾಗಿ ಕಾಯುತ್ತಿದ್ದರೆ, ಹೊಸ ವಾಹನಗಳನ್ನು ನೋಂದಾಯಿಸಿದವರು ತಮ್ಮ ನೋಂದಣಿ ಪ್ರಮಾಣಪತ್ರ(ಆರ್‌ಸಿ)ದ ಸ್ಮಾರ್ಟ್ ಕಾರ್ಡ್‌ಗಾಗಿ ಎದುರು ನೋಡುತ್ತಿದ್ದಾರೆ.
ಆದರೆ ಈ ಕಾರ್ಡ್‌ಗಳು ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆರ್ ಟಿಒ ಕಚೇರಿಗಳಲ್ಲೇ ರಾಶಿ ರಾಶಿಯಾಗಿ ಬಿದ್ದಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಅಂಚೆ ಇಲಾಖೆ ಮೂಲಕವೇ ಈ ಕಾರ್ಡ್ ಗಳು ರವಾನೆಯಾಗಬೇಕಿದ್ದರಿಂದ ಡಿಎಲ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವಾರಗಳೇ ಕಳೆದರೂ ತಮ್ಮ ಡಿಎಲ್‌ಗಳು ಇನ್ನೂ ಏಕೆ ಮನೆಗೆ ಬಂದಿಲ್ಲ ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ.
ರಾಜ್ಯ ಸಾರಿಗೆ ಇಲಾಖೆಯು ರಾಜ್ಯಾದ್ಯಂತ ಇರುವ 67 ಆರ್‌ಟಿಒಗಳಿಂದ ಡಿಎಲ್ ಮತ್ತು ಆರ್‌ಸಿಗಳನ್ನು ಸ್ಪೀಡ್‌ಪೋಸ್ಟ್ ಮೂಲಕ ವಿತರಿಸಲು ಕರ್ನಾಟಕ ಪೋಸ್ಟಲ್ ಸರ್ಕಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಡಿಎಲ್ ಮತ್ತು ಆರ್‌ಸಿಗಳನ್ನು ಪೋಸ್ಟ್ ಮಾಡಲು ವಿಳಂಬವಾಗುತ್ತಿರುವ ಬಗ್ಗೆ ತಮಗೂ ದೂರುಗಳು ಬಂದಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ಸಾರಿಗೆ ಆಯುಕ್ತ ಯೋಗೀಶ್ ಸಭೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. “ಈ ತಿಂಗಳ ಅಂತ್ಯದೊಳಗೆ ಸಂಗ್ರಹವಾದ ಎಲ್ಲಾ ಡಿಎಲ್‌ಗಳು ಮತ್ತು ಆರ್‌ಸಿಗಳನ್ನು ಪೋಸ್ಟ್ ಮಾಡುವಂತೆ ಎಲ್ಲಾ ಆರ್‌ಟಿಒಗಳಿಗೆ ತಿಳಿಸಲಾಗಿದೆ. ಅವರು ಸ್ಮಾರ್ಟ್ ಕಾರ್ಡ್‌ಗಳು ಸಿದ್ಧವಾದ ನಂತರ ತಕ್ಷಣ ಅವುಗಳನ್ನು ಪೋಸ್ಟ್ ಮಾಡಬೇಕು ಮತ್ತು ಯಾವುದೇ ವಿಳಂಬವಾಗಬಾರದು” ಎಂದು ಅಧಿಕಾರಿ ಹೇಳಿದ್ದಾರೆ.